ಆಡಿಲೇಡ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಗೆದ್ದು ಬೀಗಿದೆ. ಎರಡೂ ತಂಡಗಳ ನಡುವೆ ಡ್ರಾಪ್ ಕ್ಯಾಚ್ಗಳು ಎದುರಾಳಿಗೆ ಜೀವದಾನ ನೀಡಿದ್ದವು. ಡೆಡ್ ಪಿಚ್ನಲ್ಲಿ ಡೆಡ್ಲಿಯಾಗಿ ಬೌಲಿಂಗ್ ಮಾಡಿದ್ದು ಮಾತ್ರ ಆಸ್ಟ್ರೇಲಿಯನ್ ಫಾಸ್ಟ್ ಬೌಲರ್ ಜೇ ರಿಚರ್ಡ್ಸನ್.
ಗಾಯಗೊಂಡ ಜೋಶ್ ಹ್ಯಾಜಲ್ವುಡ್ ಸ್ಥಾನದಲ್ಲಿ ಆಟಕ್ಕೆ ಇಳಿದ್ದು ಜೇ ರಿಚರ್ಡ್ಸನ್. ಆದರೆ ಆಡಿಲೇಡ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಗೆಲ್ಲಲು ಕಾರಣವಾಗಿದ್ದೇ ಈತ. ಈ ಹಿಂದೆ ಕೇವಲ ಎರಡೇ ಎರಡು ಟೆಸ್ಟ್ ಪಂದ್ಯ ಆಡಿದ್ದ ರಿಚರ್ಡ್ಸನ್ ಈಗ ಸಿಕ್ಕಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ವೇಗ ಮತ್ತು ಸ್ವಿಂಗ್ ಮೂಲಕ ಜೋಶ್ ಹ್ಯಾಜಲ್ವುಡ್ ರಷ್ಟೇ ಪರಿಣಾಮಕಾರಿ ಅನ್ನುವುದನ್ನು ಆಡಿಲೇಡ್ ಓವಲ್ನಲ್ಲಿ ನಿರೂಪಿಸಿದ್ದಾರೆ.
ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ರಿಚರ್ಡ್ಸನ್ಗೆ ವಿಕೆಟ್ ಬಿದ್ದಿರಲಿಲ್ಲ. 25 ವರ್ಷದ ತರುಣನಿಗೆ ಒತ್ತಡದ ಎದೆಬಡಿತ ಜೋರಾಗಿತ್ತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಕಮಾಲ್ ಮಾಡಿಬಿಟ್ಟ. 4ನೇ ದಿನ ಹಸೀಬ್ ಹಮೀದ್ ವಿಕೆಟ್ ಪಡೆದು ವಿಕೆಟ್ ಬೇಟೆ ಆರಂಭಿಸಿದ. ಸೆಟ್ ಆಗಿದ್ದಂತಹ ರೋರಿ ಬರ್ನ್ಸ್ ರನ್ನು ಕೂಡ ಪವೆಲಿಯನ್ಗೆ ಅಟ್ಟಿ ಸಂಭ್ರಮಿಸಿದ್ದ.
5ನೇ ದಿನ ಇಂಗ್ಲೆಂಡ್ ಜಿಗುಟು ಆಟದಿಂದ ಆಸ್ಟ್ರೇಲಿಯನ್ನರನ್ನು ಕಂಗಾಲು ಮಾಡಿತ್ತು. ಅದರಲ್ಲೂ ಕ್ರಿಸ್ ವೋಕ್ಸ್ ಮತ್ತು ಜೋಸ್ ಬಟ್ಲರ್ ಬಿಡದಂತೆ ಕಾಡಿದ್ದರು. ಆಸ್ಟ್ರೇಲಿಯಾ ವಿಕೆಟ್ ಇಲ್ಲದೆ ಪರದಾಡುತ್ತಿದ್ದಾಗ ರಿಚರ್ಡ್ಸನ್ ವೋಕ್ಸ್ ರನ್ನು ಕ್ಲೀನ್ ಬೌಲ್ಡ್ ಮಾಡಿ ಬ್ರೇಕ್ ತಂದುಕೊಟ್ಟರು. ಬಟ್ಲರ್ ಔಟೇ ಆಗುವುದಿಲ್ಲ ಅಂದುಕೊಂಡಿದ್ದಾಗ ಅವರನ್ನು ಹಿಟ್ ವಿಕೆಟ್ ಆಗುವಂತೆ ನೋಡಿಕೊಂಡರು. ಕೊನೆಯಲ್ಲಿ ಆ್ಯಂಡರ್ಸನ್ ವಿಕೆಟ್ ಕೂಡ ರಿಚರ್ಡ್ಸನ್ ಪಾಲಾಯಿತು.
ತನ್ನ 3ನೇ ಟೆಸ್ಟ್ನಲ್ಲೇ 5 ವಿಕೆಟ್ ಗೊಂಚಲು ಪಡೆದ ರಿಚರ್ಡ್ಸನ್ ಆಸ್ಟ್ರೇಲಿಯಾದ ಹೀರೋ ಆಗಿಬಿಟ್ಟರು. ಮುಂದಿನ ಟೆಸ್ಟ್ ಪಂದ್ಯದಲ್ಲಿ ರಿಚರ್ಡ್ಸನ್ಗೆ ಜಾಗ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಆಡಿಲೇಡ್ನಲ್ಲಿ ನೀಡಿದ ಪ್ರದರ್ಶನ ಮಾತ್ರ ಯಾರೂ ಮರೆಯುವುದಿಲ್ಲ.