ಆ್ಯಶಸ್ ಸರಣಿಯ 2ನೇ ಟೆಸ್ಟ್ನಲ್ಲೂ ಆಸ್ಟ್ರೇಲಿಯಾ 275 ರನ್ಗಳ ಬೃಹತ್ ಜಯ ದಾಖಲಿಸಿದೆ. ಆಡಿಲೇಡ್ ಓವಲ್ನ ಪಿಂಕ್ ಬಾಲ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಸಂಪೂರ್ಣ ಮೇಲುಗೈ ಸಾಧಿಸಿತು. ಕೊನೆಯ ದಿನ ಇಂಗ್ಲೆಂಡ್ ಹೋರಾಟ ಮಾಡಿದರೂ ಸೋಲಿನಿಂದ ಬಚಾವಾಗಲಿಲ್ಲ. 5 ಟೆಸ್ಟ್ ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನದ ಕೊನೆಯಲ್ಲಿ ಕ್ಯಾಪ್ಟನ್ ಜೋ ರೂಟ್ ವಿಕೆಟ್ ಪಡೆದು ಗೆಲುವಿನ ಕನಸು ಕಾಣುತ್ತಿದ್ದ ಆಸ್ಟ್ರೇಲಿಯಾಕ್ಕೆ 5ನೇ ದಿನದ ಆರಂಭದಲ್ಲೇ ಯಶಸ್ಸು ಸಿಕ್ಕಿತ್ತು. ಮಿಚೆಲ್ ಸ್ಟಾರ್ಕ್ ಓಲಿ ಪೋಪ್ ವಿಕೆಟ್ ಪಡೆದು ಉತ್ತಮ ಆರಂಭ ತಂದುಕೊಟ್ಟರು. ಲಂಚ್ಗೂ ಮುನ್ನ ಬೆನ್ ಸ್ಟೋಕ್ಸ್ ಕೂಡ ನಾಥಾನ್ ಲಿಯೊನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ರು.
ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಆಸ್ಟ್ರೇಲಿಯಾ ಬೌಲರ್ಗಳ ತಲೆನೋವಿಗೆ ಕಾರಣವಾಗಿತ್ತು. ಬಟ್ಲರ್ ಕಲ್ಲುಬಂಡೆಯಂತೆ ಕ್ರೀಸ್ಗೆ ಅಂಟಿಕೊಂಡಿದ್ದರು. ವೋಕ್ಸ್ 97 ಎಸೆತಗಳಲ್ಲಿ 44 ರನ್ಗಳಿಸಿ ಜೇ ರಿಚರ್ಡ್ಸನ್ಗೆ ವಿಕೆಟ್ ಒಪ್ಪಿಸಿದರು. ಬಟ್ಲರ್ ಮತ್ತು ಒಲಿ ರಾಬಿನ್ಸನ್ ಕೂಡ ರಕ್ಷಣಾತ್ಮಕ ಆಟದಿಂದ ಆತಿಥೇಯರನ್ನು ಕಾಡಿದರು. ಆದರೆ 39 ಎಸೆತಗಳಲ್ಲಿ 8 ರನ್ಗಳಿಸಿದ ರಾಬಿನ್ಸನ್ ಸ್ಮಿತ್ಗೆ ಕ್ಯಾಚ್ ನೀಡಿ ಔಟಾದರು.
ಟೀ ವಿರಾಮದ ಬಳಿಕ ಹೆಚ್ಚು ಹೊತ್ತು ಆಟ ನಡೆಯಲಿಲ್ಲ. 207 ಎಸೆತಗಳಲ್ಲಿ 26 ರನ್ಗಳಿಸಿ ಕಲ್ಲುಬಂಡೆಯಂತೆ ಗಟ್ಟಿಯಾಗಿ ನಿಂತಿದ್ದ ಬಟ್ಲರ್ ರಿಚರ್ಡ್ಸನ್ ಎಸೆತದಲ್ಲಿ ಹಿಟ್ ವಿಕೆಟ್ ಆಗುತ್ತಿದ್ದಂತೆ ಇಂಗ್ಲೆಂಡ್ ಸೋಲು ಖಚಿತವಾಯಿತು. ಕೊನೆಯ ಆ್ಯಂಡರ್ಸನ್ ರಿಚರ್ಡ್ಸನ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ಗೆ ಕ್ಯಾಚ್ ನೀಡುತ್ತಿದ್ದಂತೆ ಆಸ್ಟ್ರೇಲಿಯಾ ಗೆಲುವಿನ ಸಂಭ್ರಮ ಆಚರಿಸಿಕೊಂಡಿತು. 275 ರನ್ಗಳ ಬೃಹತ್ ಜಯ ದಾಖಲಿಸಿದ ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಯಿಂದ ಮುನ್ನಡೆಯಿತು.