ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್(46) ಕಾರು ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ದುರಂತದ ವೇಳೆ ಸೈಮಂಡ್ಸ್ ಒಬ್ಬರೇ ಕಾರಿನಲ್ಲಿದ್ದರು. ದುರ್ಘಟನೆ ನಡೆದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ಅವರು ಗಂಭೀರವಾಗಿ ಗಾಯಗೊಂಡ ಪರಿಣಾಮ ಕೊನೆಯುಸಿರೆಳೆದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
46 ವರ್ಷದ ಕ್ರಿಕೆಟಿಗ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹಾಗು ರಾಡ್ ಮಾರ್ಷ್ ನಿಧನದ ನಂತರ ಆಸೀಸ್ ಕ್ರಿಕೆಟ್‌ಗಿದು ಮತ್ತೊಂದು ಬೇಸರದ ಸುದ್ದಿಯಾಗಿದೆ.
ಆಸೀಸ್ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಿಧನಕ್ಕೆ ಭಾರತ ಸೇರಿದಂತೆ ವಿಶ್ವ ಕ್ರಿಕೆಟ್‌ನ ಹಲವರು ಕಂಬನಿ ಮಿಡಿದಿದ್ದಾರೆ. “ಇದು ಅಂತ್ಯಂತ ದಿಗಿಲು ಹುಟ್ಟಿಸುವ ಸುದ್ದಿ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಆಸೀಸ್ ಮಾಜಿ ಕ್ರಿಕೆಟಿಗ ಜೇಸನ್ ಗಿಲ್ಲೆಸ್ಪಿ ಬೇಸರ ವ್ಯಕ್ತಪಡಿಸಿದ್ದಾರೆ. “ಸುದ್ದಿ ನಿಜವಾಗಿಯೂ ಅತೀವ ಬೇಸರ ಹುಟ್ಟಿಸುತ್ತದೆ” ಎಂದು ಆಸೀಸ್ ಹಿರಿಯ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್ ತಿಳಿಸಿದ್ದಾರೆ.
ಸೈಮಂಡ್ಸ್ ಕ್ರಿಕೆಟ್ ಪಯಣ:
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್‌ಗಳಲ್ಲಿ ಆಂಡ್ರ್ಯೂ ಸೈಮಂಡ್ಸ್ ಸಹ ಒಬ್ಬರು. ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದ ಸೈಮಂಡ್ಸ್, ಆಸ್ಟ್ರೇಲಿಯಾ ಕ್ರಿಕೆಟ್‌ನ ಅತ್ಯಂತ ಕೌಶಲ ಹೊಂದಿದ ಆಲ್‌ರೌಂಡರ್ ಎನಿಸಿದ್ದರು. 2003 ರಿಂದ 2007ರವರೆಗೆ ಆಸ್ಟ್ರೇಲಿಯಾ ಗೆದ್ದಿರುವ ಸತತ ಎರಡು ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. 1999 ಮತ್ತು 2007ರ ನಡುವೆ ವಿಶ್ವದಲ್ಲೇ ಹೆಚ್ಚು ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡಗಳ ಅವಿಭಾಜ್ಯ ಅಂಗವಾಗಿದ್ದರು.
ಆಟದ ಜೊತೆಗೆ ವಿವಾದ:
ತಮ್ಮ ಕ್ರಿಕೆಟಿಂಗ್ ಟ್ಯಾಲೆಂಟ್ ಜೊತೆಗೆ ಸೈಮಂಡ್ಸ್ ಹಲವು ವಿವಾದಗಳಿಂದ ಗಮನ ಸೆಳೆದಿದ್ದರು. ಪ್ರಮುಖವಾಗಿ 2008ರ ಹೊಸ ವರ್ಷದ ಹೊಸ್ತಿಲಲ್ಲಿ ಸಿಡ್ನಿಯಲ್ಲಿ ಭಾರತ ಮತ್ತು ಆಸೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಹರ್ಭಜನ್ ಸಿಂಗ್ ಅವರನ್ನು ಮಂಕಿ (ಮಂಗ) ಎಂದು ಕರೆದಿದ್ದರು. ಸೈಮಂಡ್ಸ್ ಅವರ ಈ ವಿವಾದ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಆಂಡ್ರ್ಯೋ ಸೈಮಂಡ್ಸ್ 26 ಟೆಸ್ಟ್ ಪಂದ್ಯಗಳಿಂದ 1462 ರನ್ ಗಳಿಸಿದ್ದರು. ಅಲ್ಲದೇ 198 ಏಕದಿನ ಪಂದ್ಯಗಳಿಂದ 39.75ರ ಸರಾಸರಿ ಹಾಗೂ 92.44ರ ಸ್ಟ್ರೈಕ್ ರೇಟ್‌ನಲ್ಲಿ 5088 ರನ್ ಕಲೆಹಾಕಿದ್ದರು. ಅಲ್ಲದೇ ಟಿ20 ಕ್ರಿಕೆಟ್‌ನಲ್ಲೂ ಕಮಾಲ್ ಮಾಡಿದ್ದ ಸೈಮಂಡ್ಸ್, 48.12ರ ಸರಾಸರಿ ಹಾಗೂ 169.34ರ ಸ್ಟ್ರೈಕ್ ರೇಟ್‌ನಲ್ಲಿ 337 ರನ್‌ಗಳಿಸಿದ್ದರು. ಅಲ್ಲದೇ ಪ್ರಥಮ ದರ್ಜೆ ಹಾಗೂ ಐಪಿಎಲ್‌ನಲ್ಲೂ ಆಂಡ್ರ್ಯೂ ಸೈಮಂಡ್ಸ್ ಮಹತ್ವದ ಸಾಧನೆ ಮಾಡಿದ್ದರು.