ದೇಶಿಯ ಕ್ರಿಕೆಟ್ನ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ರಣಜಿ ಟ್ರೋಫಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಹಲವು ಸ್ಟಾರ್ ಪ್ಲೇಯರ್ಗಳು ರಣಜಿ ತಂಡದಲ್ಲಿದ್ದಾರೆ. ವಿವಿಧ ಬದಲಾವಣೆಯೊಂದಿಗೆ ರಣಜಿ ಪಂದ್ಯಗಳು ನಡೆಯಲಿವೆ.
2 ಹಂತಗಳಲ್ಲಿ ರಣಜಿ ಟೂರ್ನಿ ನಡೆಯಲಿದೆ. ಫೆಬ್ರವರಿ 17 ರಿಂದ ಮಾರ್ಚ್ 15ರ ತನಕ ಮೊದಲ ಹಂತದ ಪಂದ್ಯಗಳು ನಡೆದರೆ, ಮೇ 30ರಿಂದ ಜೂನ್ 26ರ ತನಕ 2ನೇ ಹಂತದ ಪಂದ್ಯಗಳು ನಡೆಯಲಿವೆ.
ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಲಿದ್ದಾರೆ. ಪೂಜಾರಾ ಸೌರಾಷ್ಟ್ರ ತಂಡದಲ್ಲಿದ್ದರೆ, ರಹಾನೆ ಮುಂಬೈ ತಂಡದಲ್ಲಿದ್ದಾರೆ.
ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ಪ್ರಸಿಧ್ ಕೃಷ್ಣ, ಶ್ರೀಶಾಂತ್, ಪೃಥ್ವಿ ಷಾ, ಉಮೇಶ್ ಯಾದವ್ ಸೇರಿದಂತೆ ಹಲವು ಪ್ರಸಿದ್ಧ ಆಟಗಾರರು ವಿವಿಧ ತಂಡಗಳಲ್ಲಿದ್ದಾರೆ.
ಹಾರ್ದಿಕ್ ಪಾಂಡ್ಯಾ, ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಾಹಾ ಈ ಬಾರಿಯ ರಣಜಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಸಂಶಯ.
ರಾಬಿನ್ ಉತ್ತಪ್ಪ ಮತ್ತು ಸಂಜು ಸ್ಯಾಮ್ಸನ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಅಂಡರ್ 19 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯಶ್ ಧುಲ್ (ದೆಹಲಿ), ವೇಗಿ ರವಿ ಕುಮಾರ್ (ಪಶ್ಚಿಮ ಬಂಗಾಳ), ಹರ್ನೂರ್ ಸಿಂಗ್, ರಾಜ್ ಭಾವಾ (ಚಂಡೀಘಡ), ದಿನೇಶ್ ಬಾನಾ, ನಿಶಾಂತ್ ಸಿಂಧು (ಹರ್ಯಾಣ), ವಿಕ್ಕಿ ಓಸ್ತ್ವಾಲ್, ಕೌಶಲ್ ಥಾಂಬೆ (ಮಹಾರಾಷ್ಟ್ರ) ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ರಣಜಿ ಟ್ರೋಫಿ ಕೊನೆಯ ಬಾರಿ ನಡೆದಿದ್ದು 2019-20ರಲ್ಲಿ. ಸೌರಾಷ್ಟ್ರ ಪಶ್ಚಿಮ ಬಂಗಾಳವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ಈ ಬಾರಿಯ ಟೂರ್ನಿಯಲ್ಲಿ 38 ತಂಡಗಳು ಭಾಗವಹಿಸುತ್ತಿವೆ. 9 ಗ್ರೂಪ್ಗಳಿವೆ. 8 ತಂಡಗಳು ಎಲೈಟ್ ಬಣದಲ್ಲಿದ್ದರೆ. 1 ತಂಡ ಪ್ಲೇಟ್ ಬಣದಲ್ಲಿದೆ. ಎಲೈಟ್ ಬಣದ ಪ್ರತೀ ಗ್ರೂಪ್ನಲ್ಲಿ 4 ತಂಡಗಳಿದ್ದರೆ, ಪ್ಲೇಟ್ ಬಣದ ಗ್ರೂಪ್ನಲ್ಲಿ 6 ತಂಡಗಳಿವೆ.
ಲೀಗ್ ಹಂತದಲ್ಲಿ 57 ಪಂದ್ಯಗಳು ನಡೆಯಲಿದೆ. ಎಲೈಟ್ ಬಣದಲ್ಲಿ ಎಲ್ಲಾ ತಂಡಗಳಿವೆ 3 ಪಂದ್ಯಗಳು ಹಾಗೂ ಪ್ಲೇಟ್ ಬಣದಲ್ಲಿ 5 ಲೀಗ್ ಪಂದ್ಯಗಳು ಎಲ್ಲಾ ತಂಡಗಳು ಆಡಲಿವೆ. ಪ್ರಿ ಕ್ವಾರ್ಟರ್, ಕ್ವಾರ್ಟರ್, ಸೆಮಿಫೈನಲ್ ಹಾಗೂ ಫೈನಲ್ ಸೇರಿ ಒಟ್ಟು 65 ಪಂದ್ಯಗಳು ನಡೆಯಲಿವೆ.
ಎಲೈಟ್ ಬಣದ ಪಂದ್ಯಗಳು ರಾಜ್ಕೋಟ್, ಕಟಕ್, ಚೆನ್ನೈ, ಅಹ್ಮದಾಬಾದ್, ತಿರುವನಂತಪುರಂ, ತುಂಬ, ದೆಹಲಿ, ರೋಹ್ಟಕ್, ಗರುಗ್ರಾಂ, ಸುಲ್ತಾನ್ಪುರ ಮತ್ತು ಗವಾಹಟಿಯಲ್ಲಿ ನಡೆಯಲಿದೆ. ಪ್ಲೇಟ್ ಪಂದ್ಯಗಳು ಕೊಲ್ಕತ್ತಾದಲ್ಲಿ ನಡೆಯಲಿವೆ. ನಾಕೌಟ್ ಪಂದ್ಯದ ಆತಿಥ್ಯ ಸ್ಥಳಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.