ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ಗಳಾದ ಚೇತೇಶ್ವರ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಕಳೆದೆರಡು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಉತ್ತಮ ಇನ್ನಿಂಗ್ಸ್ ಟೆಸ್ಟ್ ಸ್ಪೆಷಲಿಸ್ಟ್ಗಳಿಗೆ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಸಿತ್ತು. ಆದರೆ ಅವಕಾಶ ಸಿಕ್ಕಾಗ ಯುವ ಆಟಗಾರರು ನೀಡಿದ ಪ್ರದರ್ಶನ ಮತ್ತು ಪದೇ ಪದೇ ದೊಡ್ಡ ಇನ್ನಿಂಗ್ಸ್ ಕಟ್ಟಲು ಎಡವಿದ್ದು ರಹಾನೇ ಮತ್ತು ಪೂಜಾರಾಗೆ ದುಬಾರಿ ಆಗುವ ಸೂಚನೆ ಕೊಟ್ಟಿತ್ತು.
ದಕ್ಷಿಣ ಆಫ್ರಿಕಾ ಪ್ರವಾಸ ಬಳಿಕ ಇವರಿಬ್ಬರನ್ನು ಟೆಸ್ಟ್ ತಂಡದಿಂದ ಹೊರಗಿಡುವುದು ಉತ್ತಮ ಅನ್ನುವ ಮಾತು ಕೇಳಿ ಬಂದಿತ್ತು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಯುವ ಆಟಗಾರರನ್ನು ಆಡಿಸಬೇಕು ಅನ್ನುವ ಚರ್ಚೆ ಜೋರಾಗಿತ್ತು. ಅಪಾಯ ಅರಿತ ರಹಾನೆ ಮತ್ತು ಪೂಜಾರಾ ರಣಜಿಯಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲು ಪ್ಲಾನ್ ಮಾಡಿದರು.
ರಣಜಿ ಟ್ರೋಫಿ ಆರಂಭವಾದ ಮೊದಲ ದಿನವೇ ರಹಾನೆ ಶತಕ ಸಿಡಿಸಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ರಹಾನೆ ಮುಂಬೈ ತಂಡವನ್ನು ಅಪಾಯದಿಂದ ಕಾಪಾಡಿದ್ದಲ್ಲದೆ ಶತಕ ಕೂಡ ಬಾರಿಸಿದ್ದಾರೆ. ಚೇತೇಶ್ವರ ಪೂಜಾರಾ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದಾರೆ. ಪೂಜಾರಾ ಕೂಡ ಉತ್ತಮ ಆಟ ಆಡಿದರೆ ಟೆಸ್ಟ್ ಸ್ಪೆಷಲಿಸ್ಟ್ಗಳಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಮತ್ತೆ ಗಟ್ಟಿಯಾಗಲಿದೆ.