ಏಷ್ಯಾ-ಓಶಿಯಾನಿಯಾ 24 ಗಂಟೆ ಓಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರಿಗೆ ಚಿನ್ನ, ಮಹಿಳೆಯರಿಗೆ ಬೆಳ್ಳಿ

ಬೆಂಗಳೂರು, ಪ್ರತಿಷ್ಠಿತ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಐಎಯು 24 ಗಂಟೆ ಅಲ್ಟ್ರಾ ಮ್ಯಾರಾಥಾನ್ ಓಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಲ್ಲದೇ ಮಹಿಳೆಯರ ತಂಡ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಶನಿವಾರ ಮತ್ತು ಭಾನುವಾರ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಭಾರತೀಯರು ಅದ್ಭುತ ಪ್ರದರ್ಶನ ತೋರಿ ಪದಕಗಳನ್ನು ಕೊಳ್ಳೆ ಹೊಡೆದರು.
ಅಮರ್ ಸಿಂಗ್ ದೆವಂಡ ಅವರ ನೇತೃತ್ವದ ಭಾರತ ತಂಡ ನಿಗದಿತ 24 ಗಂಟೆಗಳಲ್ಲಿ 739.959 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಮೊದಲ ಸ್ಥಾನ ಪಡೆಯಿತು. ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದ ಓಟ ಭಾನುವಾರ ಬೆಳಗ್ಗೆ ಮುಕ್ತಾಯಗೊಂಡಿತು.

ಅಮರ್ ಸಿಂಗ್ ವೈಯಕ್ತಿಕ ಶ್ರೇಷ್ಠ 254.418 ಕಿಲೋ ಮೀಟರ್ ದೂರ ಓಡಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ತಮ್ಮ ಹಿಂದಿನ ಶ್ರೇಷ್ಠ ದಾಖಲೆಯನ್ನು 18 ಕಿಲೋ ಮೀಟರ್‌ಗಳಿಂದ ಉತ್ತಮಗೊಳಿಸಿಕೊಂಡ ಅಮರ್ ಸಿಂಗ್ ಈ ಕೂಟದ ಪ್ರಮುಖ ಆಕರ್ಷಣೆ ಎನಿಸಿದರು.
ಸೌರವ್ ಕುಮಾರ್ ರಂಜನ್ (242.564 ಕಿ.ಮೀ.) ಮತ್ತು ಗೀನೊ ಆ್ಯಂಥೋನಿ(238.977) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದ ಕಾರಣ ವೈಯಕ್ತಿಕ ವಿಭಾಗದಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಮೂವರೂ ಸೇರಿ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟರು.
ಆಸ್ಟ್ರೇಲಿಯಾ(೬೨೮.೪೦೫) ಮತ್ತು ಚೈನೀಸ್ ತೈಪೆ(೫೬೩.೫೯೧) ತಂಡ ವಿಭಾಗದಲ್ಲಿ ಕ್ರಮವಾಗಿ ೨ ಮತ್ತು ೩ನೇ ಸ್ಥಾನಗಳನ್ನು ಪಡೆದುಕೊಂಡವು.
ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್‌ನ ಸಿಎಂಒ ಕಾರ್ತಿಕ್ ರಾಮನ್ ಮಾತನಾಡಿ, ‘ಭಾರತೀಯ ಓಟಗಾರರು ಇಂತಹ ಬಲಿಷ್ಠ ಪ್ರದರ್ಶನ ತೋರಿದ್ದು ಬಹಳ ಖುಷ ನೀಡಿದೆ. ೨೪ ಗಂಟೆಗಳ ಕಾಲ ಟ್ರ್ಯಾಕ್‌ನಲ್ಲಿ ಛಲ ಮತ್ತು ಧೈರ್ಯ ಪ್ರದರ್ಶಿಸಿದ ಪ್ರತಿಯೊಬ್ಬ ವಿಜೇತರಿಗೂ ಅಭನಂದನೆ ಸಲ್ಲಿಸುತ್ತೇನೆ’ ಎಂದರು.
ತುಂತುರು ಮಳೆ ಬೀಳುತ್ತಿದ್ದ ಕಾರಣ ವಾತಾವರಣ ಓಟಗಾರರಿಗೆ ಅಹ್ಲಾದಕರ ಅನುಭವ ನೀಡಿತು. ಭಾರತೀಯ ಮಹಿಳಾ ತಂಡವೂ ಅತ್ಯುತ್ತಮ ಪ್ರದರ್ಶನ ತೋರಿ ಎರಡನೇ ಸ್ಥಾನ ಪಡೆದುಕೊಂಡಿತು. ಓಟಗಾರ್ತಿಯರು ಒಟ್ಟು ೫೭೦.೭೦ ಕಿಲೋ ಮೀಟರ್ ದೂರ ಓಡಿ ಮೊದಲ ಸ್ಥಾನ ಪಡೆದ ಆಸ್ಟ್ರೇಲಿಯಾಗೆ ಪ್ರಬಲ ಪೈಪೋಟಿ ನೀಡಿದರು.

ಆಸ್ಟ್ರೇಲಿಯಾ ತಂಡ ೬೦೭.೬೩ ಕಿ.ಮೀ. ದೂರ ಓಡಿ ಮೊದಲ ಸ್ಥಾನ ಪಡೆದರೆ, ಚೈನೀಸ್ ತೈಪೆ ತಂಡ ೫೨೯.೦೮೨ ೩ನೇ ಸ್ಥಾನ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ತೈಪೆಯ ಕುವಾನ್ ಜು ಲಿನ್ (೨೧೬.೮೭೭ ಕಿ.ಮೀ) ಮೊದಲ ಸ್ಥಾನ ಪಡೆದರೆ, ಆಸ್ಟ್ರೇಲಿಯಾದ ಕ್ಯಾಸಿ ಕೊಹೆನ್ (೨೧೪.೯೯೦ ಕಿ.ಮೀ.), ಅಲಿಸಿಯಾ ಹೆರೊನ್(೨೧೧.೪೪೨ ಕಿ.ಮೀ.) ಕ್ರಮವಾಗಿ ೨ನೇ ಮತ್ತು ೩ನೇ ಸ್ಥಾನ ಪಡೆದರು.
Aegis Federal Life Insurance IAU 24 Hour Ultra Marathon Championship
ರೇಸ್ ನಿರ್ದೇಶಕರಗಿದ್ದ ಎನ್‌ಇಬಿ ಸ್ಪೋರ್ಟ್ಸ್‌ನ ನಾಗರಾಜ್ ಅಡಿಗ ಮತ್ತು ಆಯೋಜಕರು ಚಾಂಪಿಯನ್‌ಶಿಪ್‌ನ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ‘ಇದೇ ಮೊದಲ ಬಾರಿಗೆ ಭಾರತ ಇಷ್ಟು ದೊಡ್ಡ ಮಟ್ಟದಲ್ಲಿ ಐಎಯು ಚಾಂಪಿಯನ್‌ಶಿಪ್ ಆಯೋಜಿಸಿದೆ. ಈ ಕೂಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದು ನಾಗರಾಜ್ ಅಡಿಗ ಹೇಳಿದರು.
ಫಲಿತಾಂಶಗಳು
ತಂಡ ವಿಭಾಗ
ಪುರುಷರು: ೧.ಭಾರತ (೭೩೯.೯೫೯ ಕಿ.ಮೀ.), ೨.ಆಸ್ಟ್ರೇಲಿಯಾ (೬೨೮.೪೦೫ ಕಿ.ಮೀ.), ೩.ಚೈನೀಸ್ ತೈಪೆ(೫೬೩.೫೯೧ ಕಿ.ಮೀ.)
ಮಹಿಳೆಯರು: ೧.ಆಸ್ಟ್ರೇಲಿಯಾ (೬೦೭.೬೩೦ ಕಿ.ಮೀ.), ೨. ಭಾರತ (೫೭೦.೭೦೦ ಕಿ.ಮೀ), ೩. ಚೈನೀಸ್ ತೈಪೆ(೫೨೯.೦೮೨)
ವೈಯಕ್ತಿಕ ವಿಭಾಗ
ಪುರುಷರು: ೧.ಅಮರ್ ಸಿಂಗ್ ದೆವಂಡ (೨೫೮.೪೧೮ ಕಿ.ಮೀ), ೨.ಸೌರವ್ ರಂಜನ್(೨೪೨.೫೬೪ ಕಿ.ಮೀ), ೩.ಗೀನೊ ಆ್ಯಂಥೋನಿ(೨೩೮.೯೭೭ ಕಿ.ಮೀ.)
ಮಹಿಳೆಯರು: ೧.ಕುವಾನ್ ಜು ಲಿನ್(೨೧೬.೮೭೭ ಕಿ.ಮೀ), ೨.ಕ್ಯಾಸಿ ಕೊಹೆನ್(೨೧೪.೯೯೦ ಕಿ.ಮೀ.), ೩.ಅಲಿಸಿಯಾ ಹೆರೊನ್(೨೧೧.೪೪೨ ಕಿ.ಮೀ.)
ಮುಕ್ತ ವಿಭಾಗ
ಎಲೈಟ್ ಮಹಿಳೆ
೧.ಯೊಹಾನ ಜಕ್ರಜ್ವೆಸ್ಕಿ (ಪೋಲೆಂಡ್ ೧೯೯.೨೦)
ಓಪನ್ ಮಹಿಳೆ
೧. ತೃಪ್ತಿ ಚವಾಣ್ (ಭಾರತ ೧೩೪.೯೦ ಕಿ.ಮೀ)
ಎಲೈಟ್ ಪುರುಷ
೧.ತೊಮಾಜ್ ಪಾವ್ಲೊಸ್ಕಿ (ಪೋಲೆಂಡ್ ೨೨೨.೦೦)
ಓಪನ್ ಪುರುಷ
೧.ಸಿಕಂದರ್ ಲಾಂಬ(ಭಾರತ ೨೦೨.೩೬), ೨.ಸಂದೆಲ್ ನಿಪಾಣೆ (೧೯೦.೫೩)