ಈ ಬಾರಿಯ ರಣಜಿ ಟೂರ್ನಿಯಲ್ಲಿ ಸ್ಪೋಟಕ ಶತಕಗಳು ದಾಖಲಾಗುತ್ತಿದೆ. ದೆಹಲಿ ವಿರುದ್ಧ ತಮಿಳುನಾಡಿನ ಶಾರೂಕ್ ಖಾನ್ ಸ್ಪೋಟಕ ಶತಕ ಸಿಡಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರದ ಆಲ್ರೌಂಡರ ಅಬ್ದುಲ್ ಸಮದ್ ವಿಸ್ಪೋಟಕ ಶತಕ ಸಿಡಿಸಿದ್ದಾರೆ. ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಸಮದ್ ಸಿಡಿಸಿರುವ ಶತಕ ಎರಡನೇ ಅತೀ ವೇಗದ ಶತಕವಾಗಿದೆ.
ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡಿದ ಮೊದಲ ಇನ್ನಿಂಗ್ಸ್ನಲ್ಲಿ ಸಮದ್ 78 ಎಸೆತಗಳಲ್ಲಿ 19 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಒಳಗೊಂಡಂತೆ 103 ರನ್ ಗಳಿಸಿದರು. ಈ ಇನ್ನಿಂಗ್ಸ್ ಸಮಯದಲ್ಲಿ, ಸಮದ್ 68 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು ಮತ್ತು ರಣಜಿ ಟ್ರೋಫಿಯ ಇತಿಹಾಸದಲ್ಲಿ ವೇಗದ ಶತಕವನ್ನು ಗಳಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಅಬ್ದುಲ್ ಸಮದ್, ರಿಷಬ್ ಪಂತ್ ಹೊಂದಿದ್ದ ರಣಜಿ ಟ್ರೋಫಿಯಲ್ಲಿ ವೇಗದ ಶತಕವನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು. ಪಂತ್ 2016ರಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಜಾರ್ಖಂಡ್ ವಿರುದ್ಧ ಪಂತ್ ಈ ದಾಖಲೆ ಮಾಡಿದ್ದಾರೆ.