ಕೊನೆಯವರೆಗೂ ಕುತೂಹಲ ಮೂಡಿಸಿದ್ದ ಜಿದ್ದಾಜಿದ್ದಿನ ಪಂದ್ಯದಲ್ಲಿ 3 ರನ್ಗಳ ರೋಚಕ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆನ್ನೈ ಅಂಗಳದಲ್ಲಿ 15 ವರ್ಷಗಳ ಬಳಿಕ ಮೊದಲ ಗೆಲುವು ಸಾಧಿಸಿದೆ.
ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 172 ರನ್ಗಳಿಗೆ ತನ್ನ ಹೋರಾಟ ಮುಗಿಸುವ ಮೂಲಕ 3 ರನ್ಗಳ ಸೋಲೊಪ್ಪಿಕೊಂಡಿತು. ಈ ಜಯದೊಂದಿಗೆ ರಾಜಸ್ಥಾನ್ ಟೂರ್ನಿಯಲ್ಲಿ 3ನೇ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದರೆ. ಚೆನ್ನೈ ಸೂಪರ್ ಕಿಂಗ್ಸ್ ಮನೆಯಂಗಳದಲ್ಲಿ ಸೋಲಿನ ಆಘಾತ ಅನುಭವಿಸಿತು.
ಈ ಗೆಲುವಿನೊಂದಿಗೆ ಚೆನ್ನೈ ಅಂಗಳದಲ್ಲಿ ಸಿಎಸ್ಕೆ ವಿರುದ್ಧ ಗೆಲುವಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷಗಳ ಹುಟುಕಾಟ ಕೊನೆಗೂ ಮುಕ್ತಾಯಗೊಂಡಿತು. ಈ ಹಿಂದೆ 2008ರ ಚೊಚ್ಚಲ ಐಪಿಎಲ್ನಲ್ಲಿ ಸಿಎಸ್ಕೆ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರ ಆವೃತ್ತಿಗಳಲ್ಲಿ ನಡೆದ ಒಟ್ಟು 6 ಪಂದ್ಯಗಳಲ್ಲಿ ಚೆನ್ನೈ ವಿರುದ್ಧ ಗೆಲ್ಲುವುದಕ್ಕೆ ರಾಜಸ್ಥಾನ್ಗೆ ಸಾಧ್ಯವಾಗಿರಲಿಲ್ಲ.
ಆದರೆ 16ನೇ ಆವೃತ್ತಿಯ ಐಪಿಎಲ್ನಲ್ಲಿ 15 ವರ್ಷಗಳ ಗೆಲುವಿನ ಹುಡುಕಾಟಕ್ಕೆ ಉತ್ತರ ಕಂಡುಕೊಂಡ ರಾಜಸ್ಥಾನ್, 3 ರನ್ಗಳ ರೋಚಕ ಗೆಲುವು ಸಾಧಿಸಿತು. ನಾಯಕ ಎಂಎಸ್ ಧೋನಿ ಹಾಗೂ ರವೀಂದ್ರ ಜಡೇಜಾ ಅವರ ಹೋರಾಟದ ನಡುವೆಯೂ ಸಂದೀಪ್ ಶರ್ಮ ಅವರ ಚಾಣಾಕ್ಷ ಬೌಲಿಂಗ್ನಿಂದ ರಾಜಸ್ಥಾನ್ ಗೆಲುವಿನ ನಗೆಬೀರಿತು.
IPL 2023, Chennai Super Kings, Rajasthan Royals, MS Dhoni, Sanju Samson