ಕೊಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಎದುರಾದ ಅಚ್ಚರಿಯ ಸೋಲಿನ ಆಘಾತದಿಂದ ಹೊರಬರುವ ಲೆಕ್ಕಾಚಾರದಲ್ಲಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಇಂದು ನಡೆಯಲಿರುವ ಐಪಿಎಲ್ 16ನೇ ಆವೃತ್ತಿಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಎದುರಿಸಲಿದೆ.
ಮೊಹಾಲಿಯಲ್ಲಿ ನಡೆಯಲಿರುವ ಇಂದಿನ ಪಂದ್ಯಕ್ಕೆ ಎರಡು ತಂಡಗಳು ತಯಾರಿ ಮಾಡಿಕೊಂಡಿದ್ದು, ಎರಡು ತಂಡಗಳು ಸೋಲಿನ ಸುಳಿಯಿಂದ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿವೆ. ಕೆಕೆಆರ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸಾಯಿ ಸುದರ್ಶನ್, ವಿಜಯ್ ಶಂಕರ್ ಅಬ್ಬರದ ಬ್ಯಾಟಿಂಗ್ ಹಾಗೂ ರಶೀದ್ ಖಾನ್ ಅವರ ಹ್ಯಾಟ್ರಿಕ್ ವಿಕೆಟ್ ಸಂಭ್ರಮದ ನಡುವೆಯೂ ಅಚ್ಚರಿಯ ಸೋಲು ಕಂಡಿತ್ತು.
ರಿಂಕು ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ನಿಂದ ಕೊನೆಯ ಓವರ್ನಲ್ಲಿ ಸೋಲು ಕಂಡು ಆಘಾತ ಕಂಡಿದ್ದ ಗುಜರಾತ್ ಈ ಶಾಕ್ನಿಂದ ಹೊರ ಬರಲು ಕಾಯುತ್ತಿದೆ. ಸದ್ಯ ಆಡಿರುವ ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಪಡೆದಿರುವ ಟೈಟನ್ಸ್, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನದೊಂದಿಗೆ ಕಮ್ಬ್ಯಾಕ್ ಮಾಡಲು ಕಾಯುತ್ತಿದೆ.
ಮತ್ತೊಂದೆಡೆ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಅನುಭವಿಸಿದ 8 ವಿಕೆಟ್ಗಳ ಸೋಲಿನ ಆಘಾತದಿಂದ ಹೊರ ಬರಲು ಪಂಜಾಬ್ ಕಿಂಗ್ಸ್ ಸಹ ಇಂದಿನ ಪಂದ್ಯಕ್ಕೆ ಸಜ್ಜಾಗಿದೆ. ಸನ್ರೈಸರ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ್ದ ಪಂಜಾಬ್ ಕಿಂಗ್ಸ್ಗೆ ನಾಯಕ ಶಿಖರ್ ಧವನ್ ಆಸರೆಯಾಗಿದ್ದರು. ಪ್ರಮುಖ ಬ್ಯಾಟರ್ಗಳ ವೈಫಲ್ಯದ ನಡುವೆಯೂ ಏಕಾಂಗಿ ಹೋರಾಟ ನಡೆಸಿದ್ದ ಧವನ್, ಅಜೇಯ 99* ರನ್ಗಳಿಸಿ ತಂಡ ಗೌರವಯುತ ಮೊತ್ತ ಕಲೆಹಾಕುವಂತೆ ಮಾಡಿದ್ದರು.
ಪಂಜಾಬ್ ಕಿಂಗ್ಸ್ಗೆ ಬ್ಯಾಟ್ಸ್ಮನ್ಗಳ ವೈಫಲ್ಯವೇ ತಲೆನೋವಾಗಿದ್ದು, ನಾಯಕ ಶಿಖರ್ ಧವನ್ಗೆ ಇತರೆ ಬ್ಯಾಟರ್ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ಇಂದಿನ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲ್ಲಬೇಕಾದರೆ ಪಂಜಾಬ್ ಕಿಂಗ್ಸ್ ಸಹ ಸಂಘಟಿತ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಬೌಲಿಂಗ್ನಲ್ಲಿ ಎಡಗೈ ವೇಗಿ ಅರ್ಶದೀಪ್ ಸಿಂಗ್ ಅವರಿಗೆ ಇತರೆ ಬೌಲರ್ಗಳ ಕೈಹಿಡಿಯಬೇಕು.
IPL 2023, Shikhar Dhawan, Punjab Kings, Gujrat Titans, Hardik Pandya,