ಇತ್ತೀಚೆಗಷ್ಟೇ ಟೀಮ್ ಇಂಡಿಯಾ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದಾರೆ. ಆದರೆ ವಯಸ್ಸು ಮತ್ತು ಫಾರ್ಮ್ ಅವರನ್ನು ನಾಯಕತ್ವದಲ್ಲಿ ಬಹಳ ವರ್ಷಗಳಕಾಲ ನಿಲ್ಲುವಂತೆ ಮಾಡುವುದಿಲ್ಲ. ರೋಹಿತ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಸದ್ಯ ಬಹು ಚರ್ಚೆಗೆ ಗ್ರಾಸವಾಗಿದೆ. ಮಹೇಂದ್ರ ಸಿಂಗ್ ಧೋನಿ ನಂತರ ವಿರಾಟ್ ಕೊಹ್ಲಿ, ಚೇಸಿಂಗ್ ಸ್ಟಾರ್ ಬಳಿಕ ಹಿಟ್ ಮ್ಯಾನ್ ಹಿಗಿ ಸಾಗುತ್ತ ಬಂದ ಪರಂಪರೆಯ ಮುಂದಿನ ನಾಯಕತ್ವದ ಹುಡುಕಾಟ ನಡೆದಿದೆ.
ಐಪಿಎಲ್ 15 ಈಗ ಕೊನೆಯ ಹಂತದತ್ತ ಸಾಗುತ್ತಿದೆ. ಈ ಸೀಸನ್ ಅನೇಕ ಶ್ರೇಷ್ಠ ನಾಯಕರನ್ನು ಪರಿಚಯಿಸಿದೆ. ಆದರೆ ಕೆಲವು ಹೊಸ ಹೆಸರುಗಳು ನಾಯಕತ್ವದ ರೇಸ್‌ನಲ್ಲಿ ಇದ್ದಕ್ಕಿದ್ದಂತೆ ಮುಂದೆ ಬಂದಿವೆ. ಪ್ರತಿಯೊಬ್ಬ ನಾಯಕನಿಗೂ ಪ್ಲಸ್ ಮತ್ತು ಮೈನಸ್ ಅಂಶಗಳಿರುತ್ತವೆ. ಆದರೆ ನಾಯಕನಾಗಿರುವಾಗಲೂ ಆಟಗಾರನು ತನ್ನ ಪ್ರದರ್ಶನದಿಂದ ತಂಡವನ್ನು ಮುನ್ನಡೆಸುವುದು ಸಹ ಮುಖ್ಯವಾಗಿದೆ.
ವಿರಾಟ್ ಕೊಹ್ಲಿ ನಂತರ ರಿಷಬ್ ಪಂತ್ ಟೀಮ್ ಇಂಡಿಯಾದ ಮುಂದಿನ ನಾಯಕ ಎಂದು ಪರಿಗಣಿಸಲಾಗಿದೆ. ಯುವ ಆಟಗಾರ ಉತ್ಸಾಹದಿಂದ ಕೂಡಿದ್ದು, ಎಲ್ಲರೂ ಅವರತ್ತ ಬೊಟ್ಟು ತೋರಿಸಿದ್ದಾರೆ. ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಪಂತ್ ಅವರನ್ನು ನಾಯಕನನ್ನಾಗಿ ಮಾಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.
ನಾಯಕತ್ವದ ಒತ್ತಡದಲ್ಲಿ ಪಂತ್ ಅವರ ಪ್ರದರ್ಶನವೂ ನಿರಂತರವಾಗಿ ಕುಸಿಯುತ್ತಿದೆ. ಋತುವಿನಲ್ಲಿ ಆಡಿದ 9 ಪಂದ್ಯಗಳಲ್ಲಿ, ಅವರ ಬ್ಯಾಟ್ 33 ರ ಸರಾಸರಿಯಲ್ಲಿ 234 ರನ್ ಗಳನ್ನು ಮಾತ್ರ ಸೇರಿಸಿದ್ದಾರೆ. ಪರಿಣಾಮ ಡೆಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಬ್ಯಾಟ್‌ನೊಂದಿಗೆ ಅಬ್ಬರದ ಇನ್ನಿಂಗ್ಸ್‌ಗಳನ್ನು ಆಡಿ, ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುತ್ತಾರೆ ಮತ್ತು ನಂತರ ಟೀಮ್ ಇಂಡಿಯಾದ ನಾಯಕತ್ವಕ್ಕೆ ಬಲವಾದ ಹಕ್ಕು ಮಂಡಿಸುತ್ತಾರೆ ಎಂದು ದೆಹಲಿಯ ಅಭಿಮಾನಿಗಳು ಖಚಿತವಾಗಿ ನಂಬಿದ್ದರು. ಆದರೆ ಸಮಯ ಬದಲಾಗಿದೆ, ಭಾವನೆಗಳು ಬದಲಾಗಿವೆ ಮತ್ತು ಸಂದರ್ಭಗಳು ಬದಲಾಗಿವೆ.

ಕೋಲ್ಕತ್ತಾವು ಶ್ರೇಯಸ್ ಅವರನ್ನು ದೊಡ್ಡ ನಿರೀಕ್ಷೆಯೊಂದಿಗೆ ಖರೀದಿಸಿತು. ಆದರೆ ತಂಡದ ಪ್ರದರ್ಶನದ ಜೊತೆಗೆ ಶ್ರೇಯಸ್ ಅವರ ಸ್ವಂತ ಪ್ರದರ್ಶನವು ಸ್ಥಿರವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ತರಬೇತುದಾರ ಬ್ರೆಂಡನ್ ಮೆಕಲಮ್ ಅವರೊಂದಿಗಿನ ವಾಗ್ವಾದ ಎಲ್ಲರ ಚಿತ್ತ ಕದ್ದಿತು. ಶ್ರೇಯಸ್ ಈ ಬಾರಿ 10 ಪಂದ್ಯಗಳಲ್ಲಿ 36 ಸರಾಸರಿಯಲ್ಲಿ 324 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 133ಕ್ಕೆ ಇಳಿದಿದೆ. 85 ರನ್ ಗಳ ಇನಿಂಗ್ಸ್ ಆಡಿದ್ದರೂ ಪಂದ್ಯ ಮುಗಿಸಲು ಸಾಧ್ಯವಾಗದೆ ತಂಡ ಸೋಲನುಭವಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾದರೆ ಇಲ್ಲಿಯೂ ತಂಡದಲ್ಲಿರುವ ಆಟಗಾರರ ಸ್ಥಾನಕ್ಕೆ ಎಲ್ಲ ಕಾಲಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.

ಇನ್ನು ಹಾರ್ದಿಕ್ ಪಾಂಡ್ಯ ಅವರ ಮೇಲೂ ಎಲ್ಲರ ಚಿತ್ತ ನೆಟ್ಟಿತ್ತು. ಈ ಬಾರಿ ಹಾರ್ದಿಕ್ ಬ್ಯಾಟಿಂಗ್ ಹಾಗೂ ನಾಯಕತ್ವದ ಗುಣಗಳಿಂದ ಎಲ್ಲರ ಚಿತ್ತ ಕದ್ದಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ 8 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 7 ಪಂದ್ಯಗಳನ್ನು ಗೆದ್ದಿದ್ದಾರೆ. ಈ ವೇಳೆ ಪಾಂಡ್ಯ ಬ್ಯಾಟ್‌ನಿಂದ 308 ರನ್‌ಗಳು ಹರಿದು ಬಂದವು.

ರಾಹುಲ್… ಹೆಸರು ಭವಿಷ್ಯದ ನಾಯಕರ ಹೆಸರಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದೆ. 2018 ರಿಂದ ಪ್ರತಿ ಋತುವಿನಲ್ಲಿ ಸುಮಾರು 600 ರನ್ ಗಳಿಸಿದ ಏಕೈಕ ಆಟಗಾರ ಕೆಎಲ್ ರಾಹುಲ್. ನಾಯಕತ್ವದ ಒತ್ತಡದಲ್ಲಿ ರಾಹುಲ್ ಅವರದೇ ಪ್ರದರ್ಶನ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಅವರು ಹೆಚ್ಚಿನ ಜವಾಬ್ದಾರಿಯೊಂದಿಗೆ ಆಡುತ್ತಾರೆ. ಈ ಬಾರಿಯ ಐಪಿಎಲ್ ಋತುವಿನ 10 ಪಂದ್ಯಗಳಲ್ಲಿ ನಾಯಕರಾಗಿ ರಾಹುಲ್ 7 ಬಾರಿ ತಂಡವನ್ನು ಗೆದ್ದಿದ್ದಾರೆ.
ಈ ವೇಳೆ ಅವರ ಬ್ಯಾಟ್‌ನಿಂದ ಎರಡು ಶತಕಗಳ ನೆರವಿನಿಂದ 451 ರನ್‌ಗಳು ದಾಖಲಾಗಿವೆ. 56ರ ಸರಾಸರಿಯಲ್ಲಿ ರನ್ ಗಳಿಸುತ್ತಿರುವ ರಾಹುಲ್ 145ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ರೋಹಿತ್ ಶರ್ಮಾ ನಂತರ ನಾಯಕನ ಹುಡುಕಾಟ ಆರಂಭವಾದರೆ ಅದು ಕೆಎಲ್ ರಾಹುಲ್ ಅವರ ಮೇಲೆ ಒಂದು ಕಣ್ಣು ನೆಟ್ಟಿರುತ್ತದೆ.