ಮಧ್ಯಮ ಕ್ರಮಾಂಕದ ಆಟಗಾರ ಶದಾಬ್ ಖಾನ್(86 ರನ್ ಹಾಗೂ 4/62) ಆಲ್ರೌಂಡ್ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವನ್ನ 53 ರನ್ ಗಳಿಂದ(D/L ನಿಯಮ) ಮಣಿಸಿದ ಪಾಕಿಸ್ತಾನ, ಏಕದಿನ ಸರಣಿಯನ್ನ 3-0 ಅಂತರದಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಪಾಕಿಸ್ತಾನ 48 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 269 ರನ್ ಕಲೆಹಾಕಿತು. ಪಾಕಿಸ್ತಾನ್ ಪರ ಶದಾಬ್ ಖಾನ್(86) ಹಾಗೂ ಇಮಾಮ್-ಉಲ್-ಹಕ್(62) ತಂಡಕ್ಕೆ ಆಸರೆಯಾದರು. ಈ ಸವಾಲು ಬೆನ್ನತ್ತಿದ ವೆಸ್ಟ್ ಇಂಡೀಸ್ 37.2 ಓವರ್ಗಳಲ್ಲಿ 216 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 53 ರನ್ ಗಳ ಸೋಲನುಭವಿಸಿತು.
*ಶದಾಬ್-ಇಮಾಮ್ ಆರ್ಭಟ*
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ ಇಮಾಮ್-ಉಲ್-ಹಕ್(62) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬಂದ ಶದಾಬ್ ಖಾನ್(86) ಭರ್ಜರಿ ಬ್ಯಾಟಿಂಗ್ ಮೂಲಕ ಆಸರೆಯಾದರು. ಇವರ ಹೊರತಾಗಿ ಫಾಕರ್ ಜಮಾನ್(35) ಹಾಗೂ ಖುಷ್ ದಿಲ್(34) ಉಪಯುಕ್ತ ರನ್ ಕಲೆಹಾಕಿದರು. ಆದರೆ ಉಳಿದ ಆಟಗಾರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಹೊರಬರಲಿಲ್ಲ. ಪರಿಣಾಮ ಪಾಕಿಸ್ತಾನ 48 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿತು. ವಿಂಡೀಸ್ ಪರ ನಿಕೋಲಸ್ ಪೂರನ್(4/48) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
*ಹೊಸೈನ್ ವ್ಯರ್ಥ ಹೋರಾಟ*
ಪಾಕಿಸ್ತಾನ್ ನೀಡಿದ 270 ರನ್ ಗಳ ಟಾರ್ಗೆಟ್ ಎದುರಿಸಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಕೆರೆಬಿಯನ್ನರ ಪರ ಮಧ್ಯಮ ಕ್ರಮಾಂಕದಲ್ಲಿ ಬಂದ ಅಕೇಲ್ ಹೊಸೈನ್(60) ಹಾಗೂ ಕಾರ್ಟೆ(33) ಹೊರತುಪಡಿಸಿದರೆ ಯಾರು ಸಹ ತಂಡಕ್ಕೆ ಆಸರೆಯಾಗಲಿಲ್ಲ. ಪಾಕಿಸ್ತಾನ್ ತಂಡದ ಸಾಂಘಿಕ ಬೌಲಿಂಗ್ ದಾಳಿಗೆ ತತ್ತರಿಸಿದ ಕೆರೆಬಿಯನ್ ಪಡೆ 216 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲಿನ ಆಘಾತ ಕಂಡಿತು. ಪಾಕ್ ಪರ ಶದಾಬ್ ಖಾನ್(4/62) ಅದ್ಭುತ ಬೌಲಿಂಗ್ ಪ್ರದರ್ಶಿಸಿದರೆ. ಮೊಹಮ್ಮದ್ ನವಾಜ್, ಹಸನ್ ಅಲಿ ತಲಾ 2 ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಪಾಕಿಸ್ತಾನ್ ಮೂರು ಪಂದ್ಯಗಳ ಸರಣಿಯನ್ನ 3-0 ಅಂತರದಿಂದ ಗೆದ್ದು ಪ್ರಶಸ್ತಿ ಮುಡುಗೇರಿಸಿಕೊಂಡಿತು. ಶದಾಬ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಇಮಾಮ್-ಉಲ್-ಹಕ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.