ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ODI ಪಂದ್ಯದಲ್ಲಿ ಗೆಲುವಿನ ನಗೆಬೀರಿರುವ ಶ್ರೀಲಂಕಾ, ಈ ಗೆಲುವಿನೊಂದಿಗೆ ಆಸೀಸ್ ವಿರುದ್ಧ ಆರು ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸುವ ಮೂಲಕ ಕಡೆಗೂ ಸೋಲಿನ ಸುಳಿಯಿಂದ ಹೊರಬಂದಿದೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2ನೇ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಶ್ರೀಲಂಕಾ, 26 ರನ್ ಗಳಿಂದ ಆಸ್ಟ್ರೇಲಿಯ ತಂಡವನ್ನ ಸೋಲಿಸಿ, ಐದು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಆದರೆ ಕಾಂಗರೂಗಳ ವಿರುದ್ಧ ದೊರೆತ ಈ ಗೆಲುವು ಶ್ರೀಲಂಕಾ ತಂಡಕ್ಕೆ ಆರು ವರ್ಷಗಳ ಬಳಿಕ ODI ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದೊರೆತ ಗೆಲುವಾಗಿದೆ. 2016ರಿಂದ ಈವರೆಗೂ 5 ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಎದುರಿಸಿದ್ದ ಲಂಕಾ ಪಡೆ ಐದು ಪಂದ್ಯಗಳಲ್ಲೂ ಸೋಲಿನ ಆಘಾತ ಕಂಡಿತ್ತು. ಇದೀಗ ಆರು ವರ್ಷಗಳ ನಂತರ ಸೋಲಿನ ಸುಳಿಯಿಂದ ಶ್ರೀಲಂಕಾ ಹೊರಬಂದಿದೆ.
2ನೇ ಏಕದಿನ ಪಂದ್ಯದ ಗೆಲುವಿನೊಂದಿಗೆ ಶ್ರೀಲಂಕಾ ಹೊಸದೊಂದು ದಾಖಲೆ ನಿರ್ಮಿಸಿದ್ದು, ODI ಕ್ರಿಕೆಟ್ ನಲ್ಲಿ ಲಂಕಾ ಪಡೆ ಪಲ್ಲೆಕೆಲೆ ಮೈದಾನದಲ್ಲಿ ಅತಿ ಕಡಿಮೆ ಮೊತ್ತ ಕಲೆಹಾಕಿ ಗೆಲುವು ಸಾಧಿಸಿದ ಮೊದಲ ಪಂದ್ಯವಾಗಿದೆ. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕೇವಲ 220 ರನ್ ಕಲೆಹಾಕಿತ್ತು. ಆದರೆ ಸಾಂಘಿಕ ಬೌಲಿಂಗ್ ದಾಳಿ ನಡೆಸಿದ ಶ್ರೀಲಂಕಾ, 189 ರನ್ ಗಳಿಗೆ ಆಸೀಸ್ ತಂಡವನ್ನ ಕಟ್ಟಿಹಾಕಿ 26(DLS ಪ್ರಕಾರ) ರನ್ ಗಳಿಂದ ಗೆಲುವು ಸಾಧಿಸಿತು.
ಪಲ್ಲೆಕೆಲೆ ಅಂಗಳದಲ್ಲಿ ಈವರೆಗೂ ಮೂರು ಬಾರಿ ಆಸ್ಟ್ರೇಲಿಯಾ ತಂಡವನ್ನ ಎದುರಿಸಿರುವ ಶ್ರೀಲಂಕಾ 2 ಬಾರಿ ಗೆಲುವು ಸಾಧಿಸಿದೆ. ಆಸೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡಿದ್ದ ಶ್ರೀಲಂಕಾ, 1-2ರಿಂದ ಸರಣಿ ಸೋಲಿನ ಆಘಾತ ಕಂಡಿತ್ತು. ಬಳಿಕ ಮೊದಲ ಏಕದಿನ ಪಂದ್ಯದಲ್ಲೂ ಸೋಲನುಭವಿಸಿದ್ದ ಶ್ರೀಲಂಕಾ, 2ನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.