ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಜೋ ರೂಟ್(77*) ಹಾಗೂ ಬೆನ್ ಸ್ಟೋಕ್ಸ್(54) ಅವರ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ನ್ಯೂಜಿ಼ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅತಿಥೇಯ ಇಂಗ್ಲೆಂಡ್ ಗೆಲುವಿನತ್ತ ಮುಖ ಮಾಡಿದೆ.
ಲಾರ್ಡ್ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶನಿವಾರವು ಎರಡು ತಂಡದ ಬೌಲರ್ಗಳು ಪ್ರಾಬಲ್ಯ ಮೆರೆದರು. ಹೀಗಾಗಿ ಡೆರಿಲ್ ಮಿಚೆಲ್(108) ಹಾಗೂ ಟಾಮ್ ಬ್ಲಂಡಲ್(96) ಉತ್ತಮ ಬ್ಯಾಟಿಂಗ್ ನೆರವಿನಿಂದ ನ್ಯೂಜಿ಼ಲೆಂಡ್ ತನ್ನ 2ನೇ ಇನ್ನಿಂಗ್ಸ್ನಲ್ಲಿ 285 ರನ್ಗಳಿಸಿತು. ಹೀಗಾಗಿ ಗೆಲುವಿಗೆ 277 ರನ್ಗಳ ಟಾರ್ಗೆಟ್ ಪಡೆದಿರುವ ಇಂಗ್ಲೆಂಡ್, 3ನೇ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 216 ರನ್ಗಳಿಸಿದ್ದು, ಗೆಲುವಿಗಾಗಿ 61 ರನ್ಗಳ ಅಗತ್ಯವಿದೆ.
ಕಿವೀಸ್ ನಾಟಕೀಯ ಕುಸಿತ:
2ನೇ ದಿನದಂತ್ಯಕ್ಕೆ ಕಲೆಹಾಕಿದ್ದ 4 ವಿಕೆಟ್ಗೆ 236 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಕಿವೀಸ್ ಬೃಹತ್ ಮೊತ್ತ ಕಲೆಹಾಕುವಲ್ಲಿ ಎಡವಿತು. ದಿನದಾಟ ಆರಂಭಿಸಿದ ಮಿಚೆಲ್(108) ಹಾಗೂ ಬ್ಲಂಡಲ್(96) ದೊಡ್ಡ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದರು. ಎಚ್ಚರಿಕೆ ಆಟವಾಡಿದ ಮಿಚೆಲ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆದರೆ ಇವರಿಗೆ ಉತ್ತಮ ಸಾಥ್ ನೀಡಿದ್ದ ಬ್ಲಂಡಲ್ 4 ರನ್ಗಳಿಂದ ಶತಕ ವಂಚಿತರಾಗಿ ಹೊರ ನಡೆದರು. ಈ ವೇಳೆ ಇನ್ನಿಂಗ್ಸ್ನ 84ನೇ ಓವರ್ನಲ್ಲಿ ಡೆರಿಲ್ ಮಿಚೆಲ್, ಗ್ರ್ಯಾಂಡ್ಹೋಮ್(0) ಹಾಗೂ ಜೆಮಿಸನ್(0) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಟಿಮ್ ಸೌಥಿ(21), ಅಜಾ಼ಜ್ ಪಟೇಲ್(4), ಬೋಲ್ಟ್(4) ರನ್ಗಳಿಸಿದರು. ಪರಿಣಾಮ 2ನೇ ಇನ್ನಿಂಗ್ಸ್ನಲ್ಲಿ 285 ರನ್ಗಳಿಸಿದ ಕಿವೀಸ್, 276 ರನ್ಗಳ ಮುನ್ನಡೆ ಪಡೆಯಿತು. ಇಂಗ್ಲೆಂಡ್ ಪರ ಮ್ಯಾಥೆ ಪಾಟ್, ಸ್ಟುವರ್ಟ್ ಬ್ರಾಡ್ ತಲಾ 3 ವಿಕೆಟ್ ಪಡೆದರೆ. ಆಂಡರ್ಸನ್ 2 ಹಾಗೂ ಪಾರ್ಕಿಂನ್ಸನ್ 1 ವಿಕೆಟ್ ಪಡೆದರು.
ರೂಟ್-ಸ್ಟೋಕ್ಸ್ ಆಸರೆ:
ಪಂದ್ಯದ ಗೆಲುವಿಗೆ 277 ರನ್ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಅಲೆಕ್ಸ್ ಲೀಸ್(20), ಜ್ಯಾಕ್ ಕ್ರಾವ್ಲೆ(9) ಬಹುಬೇಗನೆ ಔಟಾದರೆ. ನಂತರ ಬಂದ ಒಲ್ಲಿ ಪೋಪ್(10) ಹಾಗೂ ಜಾನಿ ಬೈರ್ಸ್ಟೋವ್(16) ಬ್ಯಾಟಿಂಗ್ ವೈಫಲ್ಯ ಕಂಡರ. ಪರಿಣಾಮ ಇಂಗ್ಲೆಂಡ್ 69 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಮಾಜಿ ನಾಯಕ ಜೋ ರೂಟ್(77*) ಹಾಗೂ ಹಾಲಿ ಕ್ಯಾಪ್ಟನ್ ಬೆನ್ ಸ್ಟೋಕ್ಸ್(54) ತಂಡಕ್ಕೆ ಆಸರೆಯಾದರು. 5ನೇ ವಿಕೆಟ್ಗೆ 90 ರನ್ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಚೇತರಿಕೆ ನೀಡಿದರು. ಸದ್ಯ ದಿನದಂತ್ಯಕ್ಕೆ 5 ವಿಕೆಟ್ಗೆ 216 ರನ್ಗಳಿಸಿರುವ ಇಂಗ್ಲೆಂಡ್ ಪರ ರೂಟ್ ಹಾಗೂ ಫೋಕ್ಸ್(9*) ಕಣದಲ್ಲಿದ್ದಾರೆ. ಅತಿಥೇಯರ ಗೆಲುವಿಗೆ 61 ರನ್ಗಳ ಅಗತ್ಯವಿದ್ದು, ಇನ್ನು 2 ದಿನಗಳ ಆಟ ಬಾಕಿಯಿದೆ.