ಮೊದಲ ಇನ್ನಿಂಗ್ಸ್ ಹಿನ್ನೆಡೆ ನಡುವೆಯೂ ಟಾಮ್ ಬ್ಲಂಡಲ್(90*) ಹಾಗೂ ಡೆರಿಲ್ ಮಿಚೆಲ್(97*) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ನ್ಯೂಜಿ಼ಲೆಂಡ್ ಮೊದಲ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ.
ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ನ 2ನೇ ದಿನವಾದ ಇಂದು ದಿನದಾಟ ಆರಂಭಿಸಿದ ಇಂಗ್ಲೆಂಡ್ 141 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತು. ಇದಕ್ಕುತ್ತರವಾಗಿ 2ನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿ಼ಲೆಂಡ್ 2ನೇ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 236 ರನ್ಗಳಿಸಿದೆ. ಆ ಮೂಲಕ 227 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಇಂಗ್ಲೆಂಡ್ ಅಲ್ಪ ಮುನ್ನಡೆ:
ಮೊದಲ ದಿನದಂತ್ಯಕ್ಕೆ 116/7 ರನ್ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ಹೆಚ್ಚಿನ ಮೊತ್ತ ಕಲೆಹಾಕಲಿಲ್ಲ. ಕಿವೀಸ್ ಬೌಲಿಂಗ್ ದಾಳಿಗೆ ಸಿಲುಕಿದ ಅತಿಥೇಯ ತಂಡದ 141 ರನ್ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 9 ರನ್ಗಳ ಅಲ್ಪ ಮುನ್ನಡೆ ಪಡೆಯಿತು. ಕಿವೀಸ್ ಪರ ಟಿಮ್ ಸೌಥಿ 4 ವಿಕೆಟ್ ಪಡೆದು ಮಿಂಚಿದರೆ. ಟ್ರೆಂಟ್ ಬೋಲ್ಟ್ 3, ಜೇಮಿಸನ್ 2 ಹಾಗೂ ಗ್ರ್ಯಾಂಡ್ಹೋಮ್ 1 ವಿಕೆಟ್ ಪಡೆದರು.
ಅಗ್ರ ಕ್ರಮಾಂಕದ ವೈಫಲ್ಯ
ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿದ ಕಿವೀಸ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲಾಥಂ(14), ವಿಲ್ ಯಂಗ್(1), ಕೇನ್ ವಿಲಿಯಂಸನ್(15) ಹಾಗೂ ಡ್ವೇನ್ ಕಾನ್ವೆ(13) ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಪರಿಣಾಮ ಕಿವೀಸ್ ಪಡೆ 56 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಬ್ಲಂಡಲ್-ಮಿಚೆಲ್ ಆಸರೆ:
5ನೇ ವಿಕೆಟ್ಗೆ ಜೊತೆಯಾದ ಟಾಮ್ ಬ್ಲಂಡಲ್(90*) ಹಾಗೂ ಡೆರಿಲ್ ಮಿಚೆಲ್(97*) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಟಾಪ್ ಆರ್ಡರ್ ವೈಫಲ್ಯದ ನಡುವೆಯೂ ಜವಾಬ್ದಾರಿಯುತ ಆಟವಾಡಿದ ಈ ಜೋಡಿ 5ನೇ ವಿಕೆಟ್ಗೆ ಅಜೇಯ 180 ರನ್ಗಳ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು. ಪರಿಣಾಮ 2ನೇ ದಿನದ ಅಂತ್ಯಕ್ಕೆ ನ್ಯೂಜಿ಼ಲೆಂಡ್ 4 ವಿಕೆಟ್ ನಷ್ಟಕ್ಕೆ 236 ರನ್ಗಳಿಸಿದ್ದು, 227 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ 2, ಆಂಡರ್ಸನ್ ಹಾಗೂ ಬ್ರಾಡ್ ತಲಾ 1 ವಿಕೆಟ್ ಪಡೆದಿದ್ದಾರೆ.