ಗುರುವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಲಖನೌ ತಂಡದ ಆಯುಷ್ ಬದೋನಿ 3 ಎಸೆತಗಳಲ್ಲಿ 10 ರನ್ ಗಳಿಸಿದರು. ಅಲ್ಲದೆ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅಲ್ಲದೆ ಚೆನ್ನೈ ವಿರುದ್ಧವೂ ಮಿಂಚಿದ್ದರು. ಮೊದಲ ಪಂದ್ಯದಲ್ಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಛಾಪು ಮೂಡಿಸಿದ್ದರು. ಈಗ ಎಲ್ಲರ ಬಾಯಲ್ಲೂ ಅವರ ಹೆಸರು. ಜನರು ಅವರನ್ನು ಧೋನಿಯಂತೆ ಫಿನಿಶರ್ ರೀತಿ ನೋಡುತ್ತಿದ್ದಾರೆ.
ಲಖನೌ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಕೂಡ ಡೆಲ್ಲಿ ವಿರುದ್ಧ ಬದೋನಿ ಇನ್ನಿಂಗ್ಸ್ ಅನ್ನು ಶ್ಲಾಘಿಸಿದ್ದಾರೆ. ಒತ್ತಡದ ನಡುವೆಯೂ ಬದೋನಿ ಉತ್ತಮವಾಗಿ ಆಡಿದರು ಎಂದರು. ಯಾವುದೇ ಸಂದರ್ಭದಲ್ಲೂ ಅದ್ಭುತ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಅವರಲ್ಲಿದೆ. ಬದೋನಿಗೆ ಅವಕಾಶ ಸಿಕ್ಕಾಗಲೆಲ್ಲ ಅದ್ಬುತ ಇನ್ನಿಂಗ್ಸ್ ಆಡಿದ್ದು, ಎಂತಹ ಪರಿಸ್ಥಿತಿಯಲ್ಲೂ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಸಾಬೀತು ಪಡಿಸಿದ್ದಾರೆ.
![ಸಿಕ್ಕೇ ಬಿಟ್ಟಾ ಧೋನಿಯಂತಹ ಫಿನಿಶರ್ 3 ayush badoni sports lsg karntaka ipl 2022](http://sportskarnataka.com/wp-content/uploads/2022/04/ayush-badoni-1.jpg)
3 ಎಸೆತಗಳಲ್ಲಿ 10 ರನ್
ಬದೋನಿ ಡೆಲ್ಲಿ ವಿರುದ್ಧ 3 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಬದೋನಿ ಬ್ಯಾಟಿಂಗ್ಗೆ ಬಂದಾಗ ಲಖನೌ ಗೆಲುವಿಗೆ 5 ಎಸೆತಗಳಲ್ಲಿ 5 ರನ್ಗಳ ಅಗತ್ಯವಿತ್ತು. ಡೆಲ್ಲಿಯ ಅನುಭವಿ ಬೌಲರ್ ಶಾರ್ದೂಲ್ ಠಾಕೂರ್ ಮೊದಲ ಎಸೆತದಲ್ಲಿ ರನ್ಗೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಪಂದ್ಯ ರೋಚಕ ತಿರುವು ಪಡೆಯಿತು. ಪಂದ್ಯ ಯಾವುದೇ ತಂಡದ ಪರ ವಾಲಬಹುದು ಎಂದು ತೋರುತ್ತಿತ್ತು, ಆದರೆ ಬದೋನಿ ಮೂರನೇ ಎಸೆತದಲ್ಲಿ ಬೌಂಡರಿ ಮತ್ತು ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿ ಲಖನೌಗೆ ಜಯ ತಂದುಕೊಟ್ಟರು.
![ಸಿಕ್ಕೇ ಬಿಟ್ಟಾ ಧೋನಿಯಂತಹ ಫಿನಿಶರ್ 4 ayush badoni lsg sports karnataka ipl 2022](http://sportskarnataka.com/wp-content/uploads/2022/04/ayush-badoni-4.jpg)
ಈ ಹಿಂದೆ, ಬದೋನಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು 9 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಅವರ ಇನ್ನಿಂಗ್ಸ್ನಲ್ಲಿ ಎರಡು ಸಿಕ್ಸರ್ಗಳನ್ನು ಸಹ ಬಾರಿಸಿದ್ದರು. ಈ ಪಂದ್ಯದಲ್ಲೂ ತಂಡಕ್ಕೆ ಕೊನೆಯ ಓವರ್ನಲ್ಲಿ 9 ರನ್ಗಳ ಅಗತ್ಯವಿತ್ತು. ಬದೋನಿ ಕೊನೆಯ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗುರಿಯತ್ತ ಕೊಂಡೊಯ್ದರು. ಬದೋನಿ 4 ಪಂದ್ಯಗಳಲ್ಲಿ 51ರ ಸರಾಸರಿಯಲ್ಲಿ 102 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಬಾರಿ ಅರ್ಧಶತಕ ಸಿಡಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 156.92 ಆಗಿದೆ.
ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ
ಗುಜರಾತ್ ಟೈಟನ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಆಯುಷ್ ಅರ್ಧಶತಕ ಗಳಿಸಿದ್ದರು. ಅವರು 41 ಎಸೆತಗಳಲ್ಲಿ 54 ರನ್ಗಳ ಇನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್ನಲ್ಲಿ, 22 ವರ್ಷದ ಯುವ ಆಟಗಾರ 7 ಎಸೆತಗಳನ್ನು ಬೌಂಡರಿ ಹೊರಗೆ ಕಳುಹಿಸಿದ್ದರು.