ಭಾರತದ ಸ್ಟಾರ್ ಆಟಗಾರ್ತಿ ಎರಡು ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಬಾಲಿಯಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ.
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸಿಂಧು 17-21, 21-7, 21-12 ರಿಂದ ಸ್ಪೇನ್ ನ ಕ್ಲಾರಾ ಅಜುರ್ಮೆಂಡಿ ಅವರನ್ನು 47 ನಿಮಿಷಗಳ ಕಾದಾಟದಲ್ಲಿ ಮಣಿಸಿ ಮುನ್ನಡೆದರು.
ಸಿಂಧು ಮೊದಲ ಗೇಮ್ ನಲ್ಲಿ ಸೋಲು ಕಂಡರೂ, ಎರಡನೇ ಗೇಮ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು. ನಿರ್ಣಾಯಕ ಹಾಗೂ ಕೊನೆಯ ಗೇಮ್ ನಲ್ಲಿ ಸಿಂಧು ಸೊಗಸಾದ ಆಟವಾಡಿ ಮುನ್ನಡೆದರು. ಪರಿಣಾಮ ಸುಲಭ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ 13-21, 21-18, 21-15 ರಿಂದ ಆತಿಥೇಯ ದೇಶದ ಜೊನಾತನ್ ಕ್ರಿಸ್ಟಿ ಅವರನ್ನು ಒಂದು ಗಂಟೆ ಎರಡು ನಿಮಿಷದ ಕಾದಾಟದಲ್ಲಿ ಜಯ ಸಾಧಿಸಿ ಮುನ್ನಡೆದರು.
ಇನ್ನು ಎಲ್ಲರ ಚಿತ್ತ ಕದ್ದಿದ್ದ ಪ್ರಣಯ್ ಎಚ್.ಎಸ್ ಭರ್ಜರಿ ಆಟದ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರು. ಇವರು ತಮಗಿಂತ ಹೆಚ್ಚಿನ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರನ ಎದುರು ಆರ್ಭಟ ನಡೆಸಿದರು. ಪ್ರಣಯ್ 14-21, 21-19, 21-16 ರಿಂದ ಡೆನ್ಮಾರ್ಕ್ ಆಟಗಾರರನ್ನು ಸದೆ ಬಡೆದರು.