Womens Asia cup 2022- ಭಾರತ ಮಹಿಳೆಯರಿಗೆ ಆಘಾತ ನೀಡಿದ ಪಾಕ್ ಮಹಿಳೆಯರು..!
ಭಾರತ ಮಹಿಳಾ ತಂಡಕ್ಕೆ ಪಾಕಿಸ್ತಾನ ಮಹಿಳಾ ತಂಡ ಅಚ್ಚರಿಯ ಆಘಾತವನ್ನು ನೀಡಿದೆ. ಏಷ್ಯಾಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡ 13 ರನ್ ಗಳಿಂದ ಭಾರತ ಮಹಿಳಾ ತಂಡವನ್ನು ಪರಾಭವಗೊಳಿಸಿದೆ.
ಅಂದ ಹಾಗೇ ಪಾಕಿಸ್ತಾನ ಮಹಿಳಾ ತಂಡ ಆರು ವರ್ಷಗಳ ಬಳಿಕ ಭಾರತದ ವಿರುದ್ಧ ಮೊದಲ ಜಯ ಸಾಧಿಸಿದೆ. ಇನ್ನು ಟಿ-20 ಕ್ರಿಕೆಟ್ ನಲ್ಲಿ ಪಾಕ್ ಮಹಿಳಾ ತಂಡ ಮೂರನೇ ಗೆಲುವನ್ನು ದಾಖಲಿಸಿದೆ. ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು 13 ಬಾರಿ ಮುಖಾಮುಖಿಯಾಗಿವೆ.
ಏಷ್ಯಾಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಪಾಕ್ ಪರ ನಿದಾ ದಾರ್ ಅವರು ಅಜೇಯ ಅರ್ಧಶತಕ ಸಿಡಿಸಿ ಭಾರತದ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದರು. ನಿದಾ ದಾರ್ ಅವರು 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಅಜೇಯ 56 ರನ್ ಗಳಿಸಿದ್ರು. ಇನ್ನು,
ನಾಯಕಿ ಬಿಸ್ಮಾಹ್ ಮರೂಫ್ ಅವರು 32 ರನ್ ಗಳಿಸಿದ್ರೆ, ಮುನಿಬಾ ಆಲಿ 17 ರನ್ ಹಾಗೂ ಸಿದ್ರಾ ಆಮೀನ್ 11 ರನ್ ಗಳಿಸಿದ್ರು. ಇನ್ನುಳಿದ ಆಟಗಾರ್ತಿಯರು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು.
ಭಾರತ ಮಹಿಳಾ ತಂಡದ ಪರ ದೀಪ್ತಿ ಶರ್ಮಾ 27ಕ್ಕೆ ಮೂರು ವಿಕೆಟ್ ಪಡೆದ್ರೆ, ಪೂಜಾ ವಸ್ಟ್ರಾಕರ್ 23ಕ್ಕೆ 2 ವಿಕೆಟ್ ಉರುಳಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಟೀಮ್ ಇಂಡಿಯಾ 19.4 ಓವರ್ ಗಳಲ್ಲಿ 124 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲು ಅನುಭವಿಸಿತ್ತು. ಭಾರತದ ಆಟಗಾರ್ತಿಯರು ನಿಗದಿತ ಅಂತರದಲ್ಲಿ ವಿಕೆಟ್ ಕೈಚೆಲ್ಲಿಕೊಂಡ್ರು. ಸ್ಥಿರ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾದ್ರು. ಪಾಕ್ ಪರ ನಶ್ರಾ ಸಂಧು 30ಕ್ಕೆ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಹಗೇ ಸಡಿಯಾ ಇಕ್ಬಾಲ್, ನಿದ ದಾರ್ ತಲಾ ಎರಡು ವಿಕೆಟ್ ಉರುಳಿಸಿದ್ರು. ಆಲ್ ರೌಂಡ್ ಆಟವನ್ನಾಡಿದ್ದ ನಿದಾ ದಾರ್ ಅವರಿಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.