ಕ್ರಿಕೆಟ್ ಅಂದರೆ ಕೇವಲ ಎಂಜಾಯ್‌ಮೆಂಟ್ ಇರಲ್ಲ. ಆಟಗಾರರ ನಡುವೆ ಮಾತಿನ ಚಕಮಕಿ, ಕಿತ್ತಾಟ, ವಾಗ್ದಾದ ಎಲ್ಲವೂ ಇರುತ್ತೆ. ಕೆಲ ಆಟಗಾರರು ಒಂದು ಹೆಜ್ಜೆ ಮುಂದೆ ಎಂಬಂತೆ ತಮ್ಮ ಕೈಯಲ್ಲಿದ್ದ ಬ್ಯಾಟ್ ಎಸೆಯದು, ಚೆಂಡನ್ನು ಎಸೆದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದೀಗ ಅಂತಹದೇ ಮತ್ತೊಂದು ಘಟನೆ ನಡೆದಿದೆ.
ಭಾನುವಾರ ಜೋಧ್‌ಪುರದ ಬರ್ಕತುಲ್ಲಾ ಖಾನ್ ಸ್ಟೇಡಿಯಂನಲ್ಲಿ ನಡೆದ ಲೀಗ್ ಕ್ರಿಕೆಟ್‌ನ ಕ್ವಾಲಿಫೈಯರ್ ಪಂದ್ಯದ ವೇಳೆ ವಿಶ್ವದ ದಿಗ್ಗಜ ಆಟಗಾರರು ಕಿತ್ತಾಡಿಕೊಂಡಿದ್ದಾರೆ. ಭಿಲ್ವಾರಾ ಕಿಂಗ್ಸ್(Bhilwara Kings) ಮತ್ತು ಇಂಡಿಯಾ ಕ್ಯಾಪಿಟಲ್ಸ್(India Capitals) ನಡುವೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆಸೀಸ್ ಮಾಜಿ ವೇಗಿ ಮಿಚೆಲ್ ಜಾನ್ಸನ್ (Mitchell Johnson) ಮತ್ತು ಭಾರತದ ಮಾಜಿ ಸ್ಟಾರ್ ಆಲ್ ರೌಂಡರ್ ಯೂಸುಫ್ ಪಠಾಣ್ (Yusuf Pathan), ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿಕೊಂಡಿದ್ದಾರೆ. ಭಿಲ್ವಾರಾ ಕಿಂಗ್ಸ್ ಇನ್ನಿಂಗ್ಸ್‌ನ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಜಾನ್ಸನ್, ಯೂಸುಫ್ ಅವರನ್ನು ಔಟ್ ಮಾಡಿದರು. ಜಾನ್ಸನ್ ಎಸೆದ ಓವರ್ನಲ್ಲಿ ಯೂಸುಫ್ ಮೊದಲ ಮೂರು ಎಸೆತಗಳಲ್ಲಿ 6, 4 ಮತ್ತು 6 ಬಾರಿಸಿದ್ದರು. ಇದರಿಂದ ಆಸೀಸ್ ವೇಗಿ ಕುಪಿತಗೊಂಡಿದ್ದರು. ಹೀಗಾಗಿ, ವಿಕೆಟ್ ಕಬಳಿಸುತ್ತಿದ್ದಂತೆ ಆಕ್ರೋಶ ಹೊರಹಾಕಿದ್ದಾರೆ.
ಆವೇಶಭರಿತರಾಗಿ ಜಾನ್ಸನ್, ಪಠಾಣ್ ಅವರನ್ನು ದಿಟ್ಟಿಸಿ ನೋಡ ತೊಡಗಿದರು. ಇದರಿಂದ ಕೆರಳಿದ ಯೂಸುಫ್, ಏನನ್ನೋ ಮಾತನಾಡುತ್ತಾ ಜಾನ್ಸನ್ ಬಳಿಗೆ ಬಂದರು. ಈ ವೇಳೆ ಯೂಸುಫ್ ಅವರನ್ನು ಜಾನ್ಸನ್ ತಳ್ಳಿದರು. ಮತ್ತಷ್ಟು ಕೋಪಗೊಂಡ ಯೂಸುಫ್, ಜಾನ್ಸನ್ ಮೇಲೆ ಜಗಳಕ್ಕೆ ಸಜ್ಜಾದರು. ಈ ವೇಳೆ ಆನ್-ಫೀಲ್ಡ್ ಅಂಪೈರ್‌ಗಳು ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು. ಇನ್ನು, ಮೈದಾನದಲ್ಲಿ ದುರ್ವತನೆ ತೋರಿದ ಜಾನ್ಸನ್ಗೆ ಒಂದು ಪಂದ್ಯದಿಂದ ನಿಷೇಧ ಹೆರುವ ಸಾಧ್ಯತೆ ಇದೆ.
ಇನ್ನು, ಏಷ್ಯಾಕಪ್ನ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಣ ಪಂದ್ಯದಲ್ಲೂ ಇಂತಹದೇ ಘಟನೆಯೊಂದು ನಡೆದಿತ್ತು. ಪಾಕ್ ಬ್ಯಾಟರ್ ಅಸೀಫ್ ಅಲಿ, ಅಫ್ಘಾನಿಸ್ತಾನ ಬೌಲರ್ ಬೌಲರ್ ಫರೀದ್ ಅಹ್ಮದ್ ಮಲಿಕ್ ಅವರಿಗೆ ಬ್ಯಾಟ್ನಿಂದ ಹೊಡೆಯಲು ಮುಂದಾದ ಸನ್ನಿವೇಶ ಜರುಗಿತ್ತು.