ಟೀಂ ಇಂಡಿಯಾದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್(Wasshington Sundar) ಚೊಚ್ಚಲ ಕೌಂಟಿ ಕ್ರಿಕೆಟ್ನ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಮಿಂಚಿದ್ದಾರೆ. ಲ್ಯಾಂಕ್ಶೇರ್(Lancashire) ಪರ ಆಡುತ್ತಿರುವ ಟೀಂ ಇಂಡಿಯಾ ಆಲ್ರೌಂಡರ್, ನಾರ್ಥಾಂಪ್ಟನ್ಶೈರ್ (Northamptonshire) ವಿರುದ್ಧದ ಪಂದ್ಯದ ಮೊದಲ ದಿನದ ಅಂತ್ಯದಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.
ಕೌಂಟಿ ಚಾಂಪಿಯನ್ಷಿಪ್ನ(County Championship) ಪಂದ್ಯದ ಮೊದಲ ದಿನದಾಟದ ಆರಂಭದಲ್ಲಿ ಮೊದಲಿಗೆ ವಿಲ್ ಯಂಗ್ ವಿಕೆಟ್ ಪಡೆದ ಬಲಗೈ ಆಫ್ ಸ್ಪಿನ್ನರ್, ಬಳಿಕ ಎದುರಾಳಿ ತಂಡದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟದಿಂದ ಮುನ್ನಡೆಯುತ್ತಿದ್ದ ರಾಬ್ ಕಿಯೋಗ್ ಹಾಗೂ ರಯಾನ್ ರೆಕೆಲ್ಟನ್ ಜೋಡಿಯ ಆಟಕ್ಕೆ ಬ್ರೇಕ್ ಹಾಕಿದರು. ಕೆಳ ಕ್ರಮಾಂಲದಲ್ಲಿ ಟಾಪ್ ಟೇಲರ್ ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್, ಲ್ಯಾಂಕ್ಶೇರ್ ತಂಡಕ್ಕೆ ಮೊದಲ ದಿನದ ಮುನ್ನಡೆ ತಂದುಕೊಟ್ಟರು. ಸುಂದರ್(4/69) ಸ್ಪಿನ್ ದಾಳಿಗೆ ಸಿಲುಕಿದ ನಾರ್ಥಾಂಪ್ಟನ್ಶೈರ್ ತಂಡ, ಮೊದಲ ದಿನದಂತ್ಯಕ್ಕೆ 218ಕ್ಕೆ 7 ವಿಕೆಟ್ ಕಳೆದುಕೊಂಡಿದೆ. ತಂಡದ ಪರ ನಾಯಕ ಲೆವಿಸ್ ಮ್ಯಾಕ್ಮನ್ಸ್(59) ಹಾಗೂ ರಾಬ್ ಕಿಯೋಗ್(54) ರನ್ಗಳಿಸಿ ತಂಡಕ್ಕೆ ಆಸರೆಯಾದರು.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವಾಷಿಂಗ್ಟನ್ ಸುಂದರ್, 2022ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಅಲ್ಲದೇ ಇದೇ ಕಾರಣಕ್ಕೆ ಹಲವು ಟೂರ್ನಿಗಳನ್ನು ಕಳೆದುಕೊಂಡಿದ್ದ 22 ವರ್ಷದ ಆಲ್ರೌಂಡರ್, ಇಂಗ್ಲೆಂಡ್ ಕೌಂಟಿಗೆ ಭರ್ಜರಿ ಎಂಟ್ರಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಕ್ಕೆ ಮರಳುವ ನಿರೀಕ್ಷೆ ಹೊಂದಿದ್ದಾರೆ.