ಇಂಗ್ಲೆಂಡ್ನ ಅನುಭವಿ ವೇಗದ ಬೌಲರ್ ಟಿಮ್ ಬ್ರೆಸ್ನನ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕೌಂಟಿ ಕ್ರಿಕೆಟ್ ಕ್ಲಬ್ ವಾರ್ವಿಕ್ಶೈರ್ ಇದನ್ನು ಖಚಿತಪಡಿಸಿದೆ. 36 ವರ್ಷದ ಬಲಗೈ ಆಟಗಾರ 20 ವರ್ಷಗಳ ಕಾಲ ವೃತ್ತಿಪರ ಕ್ರಿಕೆಟ್ ಆಡಿದ್ದಾರೆ.
ವಾರ್ವಿಕ್ಷೈರ್ ಕೌಂಟಿಗೆ ನೀಡಿದ ಹೇಳಿಕೆಯಲ್ಲಿ ಬ್ರೆಸ್ನನ್ “ಇದು ನನಗೆ ನಂಬಲಾಗದಷ್ಟು ಕಷ್ಟಕರವಾದ ನಿರ್ಧಾರವಾಗಿದೆ. ಆದರೆ ಚಳಿಗಾಲದಲ್ಲಿ ತರಬೇತಿಗೆ ಮರಳಿದ ನಂತರ, ಕ್ರಿಕೆಟ್ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ಎಂದಿದ್ದಾರೆ.
“ಆಟದ ಬಗ್ಗೆ ನನ್ನಲ್ಲಿದ್ದ ಹಸಿವು ಮತ್ತು ಉತ್ಸಾಹ, ಅದು ಎಂದಿಗೂ ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. 2022ರ ಋತುವಿನಲ್ಲಿ ನಾನು ಆಡಬಹುದೆಂದು ನನ್ನ ಹೃದಯ ಹೇಳುತ್ತಿದೆ, ಆದರೆ ದೇಹವು ಅದಕ್ಕೆ ಸಿದ್ಧವಾಗಿಲ್ಲ. ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಬಹಳ ಹೆಮ್ಮೆಯಿಂದ ನೋಡುತ್ತೇನೆ ಮತ್ತು ವಾರ್ವಿಕ್ಷೈರ್ ಮತ್ತು ದೇಶವನ್ನು ಪ್ರತಿನಿಧಿಸುವುದು ಗೌರವವಾಗಿದೆ” ಎಂದು ತಿಳಿಸಿದ್ದಾರೆ.
2010ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಇಂಗ್ಲೆಂಡ್ ಟಿ-20 ವಿಶ್ವಕಪ್ ಗೆದ್ದಿತ್ತು. ಟಿಮ್ ಬ್ರೆಸ್ನನ್ ಕೂಡ ಆ ಸಮಯದಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಬ್ರೆಸ್ನನ್ 2010-11ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 3-1 ಅಂತರದಲ್ಲಿ ಸೋಲಿಸಿ ಆಶಸ್ ಸರಣಿಯನ್ನು ಗೆದ್ದಾಗ ತಂಡದ ಭಾಗವಾಗಿದ್ದರು. ಆ ಸರಣಿಯ ಎರಡು ಪಂದ್ಯಗಳಲ್ಲಿ ಅವರು 19.55 ಸರಾಸರಿಯಲ್ಲಿ 11 ವಿಕೆಟ್ಗಳನ್ನು ಪಡೆದಿದ್ದರು.
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು 3 ಬಾರಿ ಏಕದಿನ ಮತ್ತು 1 ಬಾರಿ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ರೆಸ್ನನ್ ಔಟ್ ಮಾಡಿದ್ದರು. ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳಲ್ಲಿ 72 ವಿಕೆಟ್, 85 ಏಕದಿನ ಪಂದ್ಯಗಳಲ್ಲಿ 109 ಮತ್ತು 34 ಟಿ-20 ಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. 2015ರಲ್ಲಿ ಇಂಗ್ಲೆಂಡ್ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 575 ವಿಕೆಟ್ಗಳು ಮತ್ತು 7 ಶತಕಗಳನ್ನು ಹೊಂದಿದ್ದಾರೆ.