ಆ್ಯಶಸ್ ಟೆಸ್ಟ್ ಸರಣಿ ಅಂತಿಮ ಹಂತಕ್ಕೆ ತಲುಪಿದೆ. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತ್ತು. ಸಿಡ್ನಿ ಟೆಸ್ಟ್ನಲ್ಲಿ ಇಂಗ್ಲೆಂಡ್ ಕೊನೆಯ ಕ್ಷಣದಲ್ಲಿ ಸೋಲಿನಿಂದ ಪಾರಾಗಿತ್ತು. ಕ್ಲೀನ್ ಸ್ವೀಪ್ ಭೀತಿ ಇಂಗ್ಲೆಂಡ್ಗೆ ಇಲ್ಲವಾದರೂ, ಮತ್ತೊಂದು ಟೆಸ್ಟ್ ಸೋಲಿನಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಇದೆ ಅನ್ನುವುದು ಸುಳ್ಳಲ್ಲ.
ಹೊಬಾರ್ಟ್ನಲ್ಲಿ ಮೊದಲ ಬಾರಿಗೆ ಡೇ ನೈಟ್ ಟೆಸ್ಟ್ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಆಡಿಲೇಡ್ನಲ್ಲೂ ಪಿಂಕ್ ಬಾಲ್ ಟೆಸ್ಟ್ ನಡೆದಿತ್ತು. ಹೀಗಾಗಿ ಆಸ್ಟ್ರೇಲಿಯಾ ಮತ್ತೊಮ್ಮೆ ಪಾರುಪತ್ಯ ಸಾಧಿಸುವ ಲೆಕ್ಕಾಚಾರದಲ್ಲಿದೆ. ಹೊಬಾರ್ಟ್ ಟೆಸ್ಟ್ಗೆ ಆಸೀಸ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಮಾರ್ಕಸ್ ಹ್ಯಾರಿಸ್ ಬದಲಿಗೆ ಉಸ್ಮಾನ್ ಖವಾಜ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಟ್ರಾವಿಡ್ ಹೆಡ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ಉಳಿದಂತೆ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಬದಲಾವಣೆ ಇಲ್ಲ.
ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್ ಫಿಟ್ ಆಗಿದ್ದಾರೆ. ಸ್ಕಾಟ್ ಬೊಲಂಡ್ ಫಿಟ್ನೆಸ್ ಟೆಸ್ಟ್ ಪಾಸಾಗಬೇಕಿದೆ. ಒಂದು ವೇಳೆ ಬೊಲಂಡ್ ಅಲಭ್ಯರಾದರೆ ಜೇ ರಿಚರ್ಡಸನ್ ಆಡಲಿದ್ದಾರೆ. ಪ್ಯಾಟ್ ಕಮಿನ್ಸ್ ಮತ್ತು ನಾಥನ್ ಲಿಯೊನ್ ಬಗ್ಗೆ ಸಮಸ್ಯೆ ಇಲ್ಲ.
ಇಂಗ್ಲೆಂಡ್ ತಂಡ ಹೇಗೆ ಬದಲಾವಣೆ ಮಾಡಬೇಕು ಅನ್ನುವ ಲೆಕ್ಕಾಚಾರದಲ್ಲಿದೆ. ಹಸೀಬ್ ಹಮೀದ್ ಬದಲಿಗೆ ರೋರಿ ಬರ್ನ್ಸ್ ರನ್ನು ಕರೆತರುವ ಯತ್ನ ಮಾಡುತ್ತಿದೆ. ಮಾರ್ಕ್ ವುಡ್ ಬದಲಿಗೆ ಕ್ರಿಸ್ ವೋಕ್ಸ್ ಗೆ ಅವಕಾಶ ಕೊಟ್ಟು ಬ್ಯಾಟಿಂಗ್ ಬಲಕ್ಕೆ ಹೆಚ್ಚು ಶಕ್ತಿ ತುಂಬುವ ಕೆಲಸ ಮಾಡುವ ಯೋಚನೆಯಲ್ಲಿದೆ. ಉಳಿದಂತೆ ಇಂಗ್ಲೆಂಡ್ ತಂಡದಲ್ಲೂ ದೊಡ್ಡ ಬದಲಾವಣೆ ಕಷ್ಟ.
ಹೊಬಾರ್ಟ್ ಪಿಚ್ ವೇಗದ ಬೌಲರ್ಗಳಿಗೆ ಸಹಕಾರಿ. ಆದರೆ ಡೇ-ನೈಟ್ ಪಂದ್ಯ ಆಗಿರುವುದರಿಂದ ಪಿಚ್ ವರ್ತನೆ ಬಗ್ಗೆಯೂ ಕುತೂಹಲವಿದೆ.