ಟೆನ್ನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್ 20 ವರ್ಷಗಳ ಬಳಿಕ ಮೊದಲ ಬಾರಿಗೆ ಎಟಿಪಿ ಶ್ರೇಯಾಂಕದಲ್ಲಿ ಟಾಪ್-100ನಿಂದ ಕೆಳಗಿಳಿದಿದ್ದಾರೆ.
22 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸ್ಪೇನ್ನ ಸ್ಟಾರ್ ಆಟಗಾರ ರಾಫೆಲ್ ನಡಾಲ್, ಟೆನ್ನಿಸ್ ಲೋಕದಲ್ಲಿ ತನ್ನ ಪ್ರಾಬಲ್ಯ ಹೊಂದಿದ್ದಾರೆ. ಆದರೆ 2003ರ ಬಳಿಕ ಇದೇ ಮೊದಲ ಬಾರಿಗೆ ಎಟಿಪಿ ಶ್ರೇಯಾಂಕದಲ್ಲಿ ಟಾಪ್-100ನೇ ಸ್ಥಾನದಿಂದ ಕುಸಿತ ಕಂಡಿದ್ದಾರೆ. ರಾಫೆಲ್ ನಡಾಲ್ 2024ರಲ್ಲಿ ಟೆನ್ನಿಸ್ನಿಂದ ನಿವೃತ್ತಿ ಪಡೆಯುವುದಾಗಿ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ದರು.
ಅಲ್ಲದೇ ಗಾಯದ ಸಮಸ್ಯೆಯ ಕಾರಣದಿಂದಾಗಿ ನಡಾಲ್, ಇತ್ತೀಚೆಗೆ ನಡೆದ 2023ರ ಫ್ರೆಂಚ್ ಓಪನ್ನಿಂದ ಹೊರಗುಳಿದಿದ್ದರು. ಕಳೆದೆರಡು ದಶಕಗಳಿಂದ ಟೆನ್ನಿಸ್ ಲೋಕದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪರಾಕ್ರಮ ಸಾಧಿಸಿದ್ದರು. 14 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ದಾಖಲೆ ಬರೆದಿರುವ ನಡಾಲ್, 2 ಬಾರಿ ಆಸ್ಟ್ರೇಲಿಯನ್ ಓಪನ್, 4 ಬಾರಿ ಯುಎಸ್ ಓಪನ್ ಹಾಗೂ 2 ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ.
ಪುರುಷರ ಟೆನ್ನಿಸ್ನಲ್ಲಿ 37 ವರ್ಷದ ನೊವಾಕ್ ಜೋಕೋವಿಚ್, 23 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನ ಗೆದ್ದಿರುವ ದಾಖಲೆ ಹೊಂದಿದ್ದಾರೆ. ಟೆನ್ನಿಸ್ ಲೋಕದ ಸರ್ವಶ್ರೇಷ್ಠ ಆಟಗಾರ ಎನಿಸಿರುವ ರಾಫೆಲ್ ನಡಾಲ್, 2024ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಟೆನ್ನಿಸ್ ವೃತ್ತಿ ಬದುಕಿಗೆ ಅದ್ದೂರಿ ತೆರೆ ಎಳೆಯುವ ನಿರೀಕ್ಷೆಯಲ್ಲಿದ್ದಾರೆ.
Tennis, Rafael Nadal, Grand Slam, Sports Karnataka