Asia Cup: ಬೇರೆ ತಂಡಗಳ ಸೋಲು ಗೆಲುವಿನ ಮೇಲೆ ರೋಹಿತ್ ಪಡೆಯ ಫೈನಲ್ ಕನಸು
ಏಷ್ಯಾ ಕಪ್ ಗೆಲ್ಲುವ ಟೀಮ್ ಇಂಡಿಯಾ ಆಸೆ ಕೊಂಚ ದೂರ ಸರಿದಂತೆ ಕಾಣುತ್ತಿದೆ. ಮಂಗಳವಾರ ಸೂಪರ್-4 ಪಂದ್ಯಾವಳಿಯಲ್ಲಿ ಶ್ರೀಲಂಕಾ ಆರು ವಿಕೆಟ್ ಗಳಿಂದ ಭಾರತವನ್ನು ಮಣಿಸಿದೆ. ಈ ಮೂಲಕ ರೋಹಿತ್ ಪಡೆಯ ಫೈನಲ್ ಗೆ ತಲುಪುವ ಕನಸಿಗೆ ಪೆಟ್ಟು ಬಿದ್ದಿದೆ. ಇನ್ನೇನ್ನಿದ್ದರು ಉಳಿದ ಪಂದ್ಯಗಳ ಫಲಿತಾಂಶದ ಮೇಲೆ ಟೀಮ್ ಇಂಡಿಯಾದ ಅಳಿವು ಉಳಿವು ನಿಂತಿದೆ.
ಸೂಪರ್-4 ಹಂತದ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ನಿರಾಸೆ ಅನುಭವಿಸಿದೆ. ಭರ್ಜರಿ ಪ್ರದರ್ಶನ ನೀಡಿದ ಶ್ರೀಲಂಕಾ ಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ಯುವ ಶ್ರೀಲಂಕಾ ಪಡೆ ಅರ್ಹ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಕಲೆ ಹಾಕಿ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ರೋಹಿತ್ ಶರ್ಮಾ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್.ರಾಹುಲ್, ಕೇವಲ 6 ರನ್ ಮಾಡಿ ಮಹೇಶ್ ತೀಕ್ಷಣ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಕೊಹ್ಲಿ ಖಾತೆ ತೆರೆಯುವ ಮುನ್ನವೇ ದಿಲ್ಶನ್ ಮಧುಶಂಕ ಬೌಲಿಂಗ್‌ನಲ್ಲಿ ಕ್ಲೀನ್‌ಬೋಲ್ಡ್ ಆದರು.
ಉತ್ತಮ ಜೊತೆಯಾಟ
ರೋಹಿತ್ ಶರ್ಮಾ ಅವರನ್ನು ಸೇರಿಕೊಂಡ ಸೂರ್ಯಕುಮಾರ ಯಾದವ್, ಆತ್ಮ ವಿಶ್ವಾಸದಿಂದ ಬ್ಯಾಟಿಂಗ್ ಮಾಡಿ ರನ್ ಕದಿಯುತ್ತ ಸಾಗಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 9.4 ಓವರ್‌ಗಳಲ್ಲಿ 97 ರನ್ ಸೇರಿಸಿ ತಂಡದ ಮೊತ್ತವನ್ನು 12.2 ಓವರ್‌ಗಳಲ್ಲಿ 110 ಕ್ಕೆ ಹೆಚ್ಚಿಸಿದರು.
ಆಕರ್ಷಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 41 ಎಸೆತಗಳಲ್ಲಿ, 5 ಬೌಂಡರಿ, 4 ಸಿಕ್ಸರ್ ನೆರವಿನಿಂದ 72 ರನ್ ಮಾಡಿ, ಚಾಮಿಕ ಕರುಣರತ್ನೆಗೆ ಬಲಿಯಾದರು.
ನಂತರ ತಂಡದ ಮೊತ್ತಕ್ಕೆ ಒಂಬತ್ತು ರನ್ ಸೇರ್ಪಡೆಯಾಗುತ್ತಿದ್ದಂತೆ ಸೂರ್ಯಕುಮಾರ ಯಾದವ್, ದಾಸುನ್ ಶನಕ ಬೌಲಿಂಗ್‌ನಲ್ಲಿ ಮಹೇಶ್ ತೀಕ್ಷಣಗೆ ಕ್ಯಾಚ್ ನೀಡಿದರು. ಸೂರ್ಯ 34 ರನ್ ಸಿಡಿಸಿದರು.
ಹಾರ್ದಿಕ್ ಪಾಂಡೆ (17), ರಿಷಬ್ ಪಂತ್ (17) ಹಾಗೂ ರವಿಚಂದ್ರನ್ ಅಶ್ವಿನ್ ಅಜೇಯ (15)ರನ್ ಮಾಡಿ ತಂಡದ ಮೊತ್ತ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ವಿಕೆಟ್ ನಷ್ಟಕ್ಕೆ 173 ಮುಟ್ಟಿಸಿದರು.
ಶ್ರೀಲಂಕಾ ಪರ ದಿಲ್ಶನ್ ಮಧುಶಂಕ 24 ಕ್ಕೆ ಮೂರು, ದಾಸುನ್ ಶನಕ, ಚಾಮಿಕ ಕರುಣರತ್ನೆ ಎರಡು ವಿಕೆಟ್ ಉರುಳಿಸಿದರು.
ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭಿಕ ಪತನು ನಿಸ್ಸಾಂಕ ಹಾಗೂ ಕುಸಾಲ್ ಮೆಂಡೀಸ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಬೇರ್ಪಡಿಸಲು ರೋಹಿತ್ ಪಡೆಯ ಬೌಲರ್ ಗಳು ವಿಫಲವಾದರು. ಟೀಮ್ ಇಂಡಿಯಾದ ಬೌಲಿಂಗ್ ಸವಾಲು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಆರಂಭಿಕ ಜೋಡಿ ಅಬ್ಬರಿಸಿತು.
ಈ ಜೋಡಿ 11.1 ಓವರ್ ಗಳಲ್ಲಿ 97 ರನ್ ಸೇರಿಸಿತು. ಪತನು 37 ಎಸೆತಗಳಲ್ಲಿ 52 ರನ್ ಸಿಡಿಸಿ ಚಹಾಲ್ ತೋಡಿದ ಖೆಡ್ಡಾಗೆ ಬಲಿಯಾದರು. ಇವರ ಮನಮೋಹಕ ಇನ್ನಿಂಗ್ಸ್ ನಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿವೆ.
ಮಧ್ಯಮ ಕ್ರಮಾಂಕದ ಚರಿತ್ ಅಸಲಂಕಾ (0), ದನುಶ್ಕ ಗುಣತಿಲಕ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರಂಭಿಕ ಕುಸಾಲ್ ಮೆಂಡೀಸ್ 4 ಬೌಂಡರಿ, 3 ಸಿಕ್ಸರ್ ಸೇರಿದಂತೆ 57 ರನ್ ಸಿಡಿಸಿ ಔಟ್ ಆದರು.
ಉಳಿದಂತೆ ಭನುಕ ರಾಜಪಕ್ಸೆ ಹಾಗೂ ದಸುನ್ ಶನಕ ಜೋಡಿ ತಂಡಕ್ಕೆ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಎಡವಿತು. ಈ ಜೋಡಿ 34 ಎಸೆತಗಳಲ್ಲಿ ಅಜೇಯ 64 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಭನುಕ ರಾಜಪಕ್ಸೆ (ಅಜೇಯ 25) ಹಾಗೂ ದಸುನ್ ಶನಕ (ಅಜೇಯ 33) ಗೆಲುವಿನಲ್ಲಿ ಮಿಂಚಿದರು.
Team India, Final, Asia Cup, Sri Lanka