T20 ವಿಶ್ವಕಪ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದ್ದು, ನವೆಂಬರ್ 13ರಂದು ನಡೆಯುವ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್(England) ಹಾಗೂ ಪಾಕಿಸ್ತಾನ(Pakistan) ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಮೆಲ್ಬೋರ್ನ್ ಅಂಗಳದಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಸೆಮಿಫೈನಲ್‌ನಲ್ಲಿ ತೋರಿದ ಶ್ರೇಷ್ಠ ಪ್ರದರ್ಶನದೊಂದಿಗೆ ಉಭಯ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟಿವೆ. ಈ ನಡುವೆ ಫೈನಲ್ ಫೈಟ್‌ನಲ್ಲಿ ಉಭಯ ತಂಡಗಳ ಸ್ಟಾರ್ ಪ್ಲೇಯರ್ಸ್‌ಗಳು ಮುಖಾಮುಖಿ ಆಗಲಿದ್ದಾರೆ. ಪ್ರಮುಖವಾಗಿ ಎರಡೂ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಭರ್ಜರಿ ಫಾರ್ಮ್‌ಗೆ ಮರಳಿರುವುದು ಈ ತಂಡಗಳ ಬ್ಯಾಟಿಂಗ್ ಬಲವನ್ನ ಇನ್ನಷ್ಟು ಬಲಿಷ್ಠಗೊಳಿಸಿದೆ.

ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್, ಫೈನಲ್‌ನಲ್ಲಿ ಯಾವ ರೀತಿ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಸೆಮೀಸ್ ಕದನದಲ್ಲಿ ಭಾರತದ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧವೂ ಇದೇ ಪ್ರದರ್ಶನ ನೀಡುವ ನಿರೀಕ್ಷೆ ಹುಟ್ಟಿಸಿದ್ದಾರೆ. ಇವರೊಂದಿಗೆ ಬಿಗ್ ಮ್ಯಾಚ್ ಪ್ಲೇಯರ್ ಎನಿಸಿರುವ ಇಂಗ್ಲೆಂಡ್‌ನ ಆಲ್ರೌಂಡರ್ ಮೊಯಿನ್ ಅಲಿ ಸಹ ಫೈನಲ್‌ನಲ್ಲಿ ತಂಡಕ್ಕೆ ಆಸರೆಯಾಗುವ ಸಾಧ್ಯತೆ ಇದೆ.

ಪಾಕಿಸ್ತಾನದ ಪರ ಹ್ಯಾರಿಸ್ ರೌಫ್, ಅದ್ಭುತ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಮೆಲ್ಬೋರ್ನ್ ಮೈದಾನ ವೇಗದ ಬೌಲರ್‌ಗಳ ಪಾಲಿಗೆ ಸ್ವರ್ಗವಾಗಿದ್ದು, ಒಂದೊಮ್ಮೆ ಪಾಕಿಸ್ತಾನಕ್ಕೆ ಮೊದಲು ಬೌಲಿಂಗ್ ಮಾಡುವ ಅವಕಾಶ ದೊರೆತರೆ, ಹ್ಯಾರಿಸ್ ರೌಫ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವ ಸಾಧ್ಯತೆ ಇದೆ. ಇವರೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ಹ್ಯಾರಿಸ್ ಸಹ ಆಂಗ್ಲರಿಗೆ ದೊಡ್ಡ ಸವಾಲಾಗಲಿದ್ದಾರೆ. ಟೂರ್ನಿಯಲ್ಲಿ ಈಗಾಗಲೇ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿರುವ ಹ್ಯಾರಿಸ್, ಕೇವಲ 15-20 ಬಾಲ್‌ಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಬ್ಬರ ಜೊತೆಗೆ ಆಲ್ರೌಂಡರ್ ಶದಾಬ್ ಖಾನ್ ಕೂಡ ಕೈಜೋಡಿಸಿದ್ದೇ ಆದಲ್ಲಿ ಎದುರಾಳಿ ತಂಡಕ್ಕೆ ಇವರ ಸವಾಲನ್ನು ಎದುರಿಸುವುದು ಅತ್ಯಂತ ಕಠಿಣವಾಗುವುದರಲ್ಲಿ ಸಂದೇಹವೇ ಇಲ್ಲ.