ಅಮ್ಮನ ಕನಸನ್ನು ನನಸು ಮಾಡಿದ ಮಗಳು ಸಿಮೋನಾ ಹಲೇಪ್
ಅಮ್ಮನ ಕನಸನ್ನು ನನಸು ಮಾಡಿದ ಮಗಳು ಸಿಮೋನಾ ಹಲೇಪ್
10ರ ಹರೆಯದಲ್ಲಿ ಅಮ್ಮನಿಗೆ ಮಾತು ಕೊಟ್ಟಿದ್ದ ಸಿಮೋನಾ ಹಲೇಪ್
27ರ ಹರೆಯದಲ್ಲಿ ಕೊಟ್ಟ ಮಾತನ್ನು ಈಡೇರಿಸಿದ್ದ ಮಗಳು ಸಿಮೋನಾ
ಎರಡನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ರೊಮಾನಿಯಾದ ಸಿಮೋನಾ
ಅಮ್ಮನಿಗಾಗಿ ಸೆರೆನಾ ವಿಲಿಯಮ್ಸ್ ಕನಸನ್ನು ಭಗ್ನಗೊಳಿಸಿದ ಹಲೇಪ್
2019ರ ಮಹಿಳಾ ವಿಂಬಲ್ಡನ್ ರಾಣಿ ಸಿಮೋನಾ ಹಲೇಪ್
ಆಕೆಗೆ ಈಗ 27ರ ಹರೆಯ… ಸುಮಾರು 17 ವರ್ಷಗಳ ಹಿಂದೆ… ಅಂದ್ರೆ ಅಕೆಗೆ 10ರ ಪ್ರಾಯ. ಟೆನಿಸ್ ಆಟವನ್ನು ಕಲಿಯುತ್ತಿದ್ದ ಹುಡುಗಿ. ಮಗಳ ಟೆನಿಸ್ ಪ್ರೀತಿ ಹಾಗೂ ಆಟವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದ ತಾಯಿ. ಮಗಳನ್ನು ಅಪ್ರತಿಮ ಟೆನಿಸ್ ಆಟಗಾರ್ತಿಯನ್ನಾಗಿಸಬೇಕು ಅನ್ನೋ ಹಂಬಲದಲ್ಲಿದ್ದರು ಆ ಹುಡುಗಿಯ ತಾಯಿ. ಅಲ್ಲದೆ ಅಂಗಣದಲ್ಲಿ ಅವತ್ತೇ ಮಗಳ ಬಳಿ ತಾಯಿ ಮಾತೊಂದು ಕೇಳಿದ್ದಳು. ಮಗಳೇ ನನಗೆ ಒಂದು ಮಾತು ಕೊಡುತ್ತಿಯಾ… ಇದು ಬರೀ ಮಾತಲ್ಲ. ನನ್ನ ಬದುಕಿನ ಕನಸು ಕೂಡ. ಹೌದು, ನನ್ನದೊಂದು ಕನಸಿದೆ. ಅದನ್ನು ಈಡೇರಿಸಿಕೊಡುತ್ತಿಯಾ … ಒಂದು ಕ್ಷಣ ತಾಯಿಯ ಮಾತು ಕೇಳಿ ಆ ಹುಡುಗಿ ತಬ್ಬಿಬ್ಬುಗೊಂಡಿದ್ದಳು.
ಯಾಕಂದ್ರೆ ಅದು ಬರೀ ಮಾತು ಆಗಿರಲಿಲ್ಲ. ಅದೊಂದು ಕನಸಾಗಿತ್ತು. ಹಾಗಂತ ಆ ಕನಸು ಸಾಮಾನ್ಯ ಕನಸನಾಗಿರಲಿಲ್ಲ. ಅದನ್ನು ನನಸು ಮಾಡೋದು ಕೂಡ ಅಂದುಕೊಂಡಷ್ಟು ಸುಲಭವೂ ಇರಲಿಲ್ಲ. ಆದ್ರಿಂದ ತಾಯಿಗೆ ಮಾತು ಕೊಡೋದು ಅಂದ್ರೆ … ಆದ್ರೂ ನಗು ನಗುತ್ತಲೇ ಆಯ್ತಾಮ್ಮ ಅಂತ ಅಂದುಬಿಟ್ಟಿದ್ದಳು ಆ ಹುಡುಗಿ.
ಸರಿಯಾಗಿ 15 ವರ್ಷಗಳ ನಂತರ. ಅದು ಜುಲೈ 13… ಶನಿವಾರ… ಲಂಡನ್ನ ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ ಅಂಗಣದಲ್ಲಿ.. ಅಂದು ಮಾತು ಕೊಟ್ಟಿದ್ದ ಹುಡುಗಿ ಅಂಗಣದಲ್ಲಿ ಆಡುತ್ತಿದ್ದಳು.. ಮಿನುಗುವ ಟ್ರೋಫಿ ಹಿಡಿದುಕೊಂಡು ಸಂಭ್ರಮಿಸುತ್ತಿದ್ದಳು.. ಅದೇ ರೀತಿ ಅಂದು ಕನಸು ಕಂಡಿದ್ದ ಆ ಹುಡುಗಿಯ ತಾಯಿ ಸೆಂಟರ್ ಕೋರ್ಟ್ ನ ಗ್ಯಾಲರಿಯಲ್ಲಿ ಕುಳಿತುಕೊಂಡು ಮಗಳ ಆಟವನ್ನು ನೋಡುತ್ತಿದ್ದಳು. ಮಗಳ ಗೆಲುವಿನ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಳು… ಅಮ್ಮನಿಗೆ ಕನಸು ನನಸಾದ ಖುಷಿ… ಮಗಳಿಗೆ ಅಮ್ಮನ ಕನಸು ನನಸು ಮಾಡಿದ ಸಂಭ್ರಮ…
ನಿಜ, ಈ ಬಾರಿಯ ವಿಂಬಲ್ಡನ್ ಟೂರ್ನಿ ಅಪರೂಪದ ವಿಸ್ಮಯಕ್ಕೆ ಸಾಕ್ಷಿಯಾಯ್ತು. ಮಗಳ ಬಗ್ಗೆ ಅಮ್ಮ ಕಟ್ಟಿಕೊಂಡಿದ್ದ ಕನಸು.. ಅಮ್ಮನ ಕನಸನ್ನು ನನಸಾಗಿಸಿದ್ದ ಮಗಳು.. ಹಾಗಂತ ಇದು ಭ್ರಮೆ ಅಲ್ಲ. ವಾಸ್ತವ. ಹೌದು, ಸಿಮೋನಾ ಹಲೇಪ್.. ಈ ಹೆಸರು ಗೊತ್ತೇ ಇರಬೇಕು. ಯಾಕಂದ್ರೆ 2017ರಲ್ಲಿ ಮಹಿಳಾ ಟೆನಿಸ್ ನಲ್ಲಿ ಈ ಹೆಸರಿನ ಮುಂದೆ ನಂಬರ್ ವನ್ ಆಟಗಾರ್ತಿ ಎಂಬ ಅನ್ನೋ ಟ್ಯಾಗ್ ಲೈನ್ ಕೂಡ ಬಿದ್ದಿತ್ತು.
ಅಷ್ಟಕ್ಕೂ ಈ ಸಿಮೋನಾ ಗೆದ್ದಿರೋದು ಬರೀ ಎರಡು ಗ್ರ್ಯಾಂಡ್ ಸ್ಲ್ಯಾಂ ಹಾಗೂ ಒಂದು ರನ್ನರ್ ಅಪ್. 2015ರ ಯುಎಸ್ ಓಪನ್ ನಲ್ಲಿ ಸೆಮೀಸ್ ಎಂಟ್ರಿಯಾಗಿರೋದು.. 2018ರ ಆಸ್ಟ್ರೇಲಿಯನ್ ಓಪನ್ ನಲ್ಲಿ ರನ್ನರ್ ಅಪ್ ಆಗಿರೋದು.. 2018ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರೋದು… 2019ರ ವಿಂಬಲ್ಡನ್ ಪ್ರಶಸ್ತಿ ಗೆದ್ದಿರೋದು. ಇದು ಸಿಮೋನಾ ಹಲೇಪ್ ಅವರ ಸಾಧನೆ. ಇದನ್ನು ಬಿಟ್ರೆ 18 ಡಬ್ಲ್ಯೂಟಿಎ ಹಾಗೂ ಆರು ಐಟಿಎಫ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ ಸಿಮೋನಾ ಹಲೇಪ್.
ರೊಮಾನಿಯಾದ ಸಿಮೋನಾ ಹಲೇಪ್ 2006ರಲ್ಲಿ ವೃತ್ತಿ ಪರ ಟೆನಿಸ್ ಜಗತ್ತಿಗೆ ಕಾಲಿಟ್ರೂ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವುದು ಕನಸಿನ ಮಾತಾಗಿತ್ತು. ಆದ್ರೆ ಹಠ ಬಿಡದ ಸಿಮೊನಾ 12 ವರ್ಷಗಳ ಬಳಿಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡ್ರು. 2018ರ ಫ್ರೆಂಚ್ ಓಪನ್ ನ ಗೆದ್ದಿರುವ ಸಿಮೋನಾ 2019ರ ವಿಂಬಲ್ಡನ್ ಪ್ರಶಸ್ತಿ ಗೆದ್ದು ಹೊಸ ಇತಿಹಾಸವನ್ನೇ ಬರೆದ್ರು. ಫೈನಲ್ ಪಂದ್ಯದಲ್ಲಿ ಸಿಮೊನಾ ಹಲೇಪ್ ಅವರು 6-2, 6-2ರಿಂದ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ್ರು. ಅಲ್ಲದೆ ತಾಯಿಯ ಕನಸನ್ನು ನನಸಾಗಿಸಿದ್ರು. ಆದ್ರೆ ತಾಯಿಯ ಕನಸನ್ನು ನನಸು ಮಾಡಿದ್ದ ಸಿಮೋನಾ ಹಲೇಪ್ ಅವರು ಸೆರೆನಾ ವಿಲಿಯಮ್ಸ್ ಅವರ ಕನಸನ್ನು ಭಗ್ನಗೊಳಿಸಿದ್ರು.
24 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಸಮಗೊಳಿಸುವ ಸೆರೆನಾ ವಿಲಿಯಮ್ಸ್ ಅವರ ಕನಸು ಇನ್ನೂ ಕನಸಾಗಿಯೇ ಉಳಿದಿದೆ. 37ರ ಹರೆಯದ ಸೆರೆನಾ ವಿಲಿಯಮ್ಸ್ ಕೇವಲ 56 ನಿಮಿಷಗಳ ಹೋರಾಟದಲ್ಲಿ ಸಿಮೋನಾ ಅವರಿಗೆ ತಲೆಬಾಗಿದ್ರು.
ಅಂದ ಹಾಗೇ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಲು ಸಿಮೊನಾ ಹಲೇಪ್ ಅವರಿಗೆ ಸ್ಪೂರ್ತಿ ನೀಡಿದ್ದು ರೋಜರ್ ಫೆಡರರ್. ಸೆರೆನಾ ವಿರುದ್ಧ ಹೇಗೆ ಆಡಬೇಕು, ಅವರನ್ನು ಹೇಗೆ ಮಣಿಸುವುದು ಎಂಬುದರ ಬಗ್ಗೆ ಸಿಮೋನಾ ಅವರಿಗೆ ರೋಜರ್ ಫೆಡರರ್ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದರು. ಅದನ್ನು ಸರಿಯಾಗಿಯೇ ಬಳಸಿಕೊಂಡ ಸಿಮೋನಾ ಅವರು ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಲು ಯಶÀಸ್ವಿಯಾದ್ರು. ಈ ಮೂಲಕ ಸೆರೆನಾ ವಿಲಿಯಮ್ಸ್ ಅವರ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳ ಸಂಖ್ಯೆ ಸದ್ಯ 23ರಲ್ಲಿ ನಿಂತಿದೆ.