ತಮ್ಮ ಅದ್ಭುತ ಬ್ಯಾಟಿಂಗ್ ಟ್ಯಾಲೆಂಟ್(Batting Talent) ನಿಂದ ಸದ್ದು ಮಾಡಿರುವ ಯುವ ಆಟಗಾರ ಶ್ರೇಯಸ್ ಅಯ್ಯರ್, ಟೀಂ ಇಂಡಿಯಾ(Team India) ದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮ(Rohit Sharma) ಹಾದಿಯಲ್ಲೇ ಸಾಗುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಒಂದೊಂದೆ ಯಶಸ್ಸಿನ ಮೆಟ್ಟಿಲು ಏರುತ್ತಿರುವ ಅಯ್ಯರ್, ವಿಶ್ವ ಕ್ರಿಕೆಟ್ನ ಭವಿಷ್ಯದ ಸೂಪರ್ ಸ್ಟಾರ್ ಆಗುವ ಮುನ್ಸೂಚನೆ ನೀಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಶ್ರೇಯಸ್ ಅಯ್ಯರ್, ಇತ್ತೀಚೆಗೆ ತವರಿನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ODI ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಯ್ಯರ್, 191 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, ಒಂದು ಅರ್ಧಶತಕ ಒಳಗೊಂಡಿದೆ. ಪ್ರಮುಖವಾಗಿ ರಾಂಚಿಯಲ್ಲಿ ನಡೆದ ಎರಡನೇ ODI ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಶ್ರೇಯಸ್, ಟೀಂ ಇಂಡಿಯಾಕ್ಕೆ ಗೆಲುವಿನ ಶ್ರೇಯ ತಂದುಕೊಡುವ ಜೊತೆಗೆ ಸರಣಿ ಗೆಲುವಿನ ಆಸೆಯನ್ನ ಜೀವಂತವಾಗಿಸಿದರು.
ODIನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್, 2019ರ ವಿಶ್ವಕಪ್ ನಂತರದಲ್ಲಿ ಏಕದಿನ ಕ್ರಿಕೆಟ್ನಲ್ಲಿ 1000 ಸಾವಿರಕ್ಕೂ ಅಧಿಕ ರನ್ಗಳಿಸಿರುವ ಮೂವರು ಭಾರತೀಯ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಯುವ ಬ್ಯಾಟ್ಸ್ಮನ್ 27 ಏಕದಿನ ಪಂದ್ಯಗಳಲ್ಲಿ ಎರಡು ಶತಕದೊಂದಿಗೆ 49ರ ಸರಾಸರಿಯಲ್ಲಿ 1089 ರನ್ಗಳಿಸಿದ್ದು, ಕನ್ನಡಿಗ ಕೆ.ಎಲ್.ರಾಹುಲ್, 1192 ರನ್ಗಳಿಸಿದ್ದಾರೆ. ಅಲ್ಲದೇ 2019ರ ಏಕದಿನ ವಿಶ್ವಕಪ್ ಬಳಿಕ ODI ಕ್ರಿಕೆಟ್ನಲ್ಲಿ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ನಂತರದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ಆಟಗಾರ ಎನಿಸಿದ್ದಾರೆ.
2022ರಲ್ಲಿ ಅದ್ಭುತ ಬ್ಯಾಟಿಂಗ್ ಲಯದಲ್ಲಿರುವ ಶ್ರೇಯಸ್ ಅಯ್ಯರ್, ಆಡಿರುವ 11 ODI ಪಂದ್ಯಗಳಲ್ಲಿ 486 ರನ್ಗಳಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ 4 ಅರ್ಧಶತಕ ಒಳಗೊಂಡಿದೆ. ತಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್, 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನ ಖಚಿತಪಡಿಸಿಕೊಳ್ಳುತ್ತಿದ್ದಾರೆ.