S Sreesanth – ನಾನಿರುತ್ತಿದ್ರೆ ವಿರಾಟ್ ಮೂರು ವಿಶ್ವಕಪ್ ಗೆಲ್ಲುತ್ತಿದ್ದರು..!

ನಾನು ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾದಲ್ಲಿ ಆಡುತ್ತಿದ್ರೆ ಮೂರು ವಿಶ್ವಕಪ್ ಗೆಲ್ಲಬಹುದಿತ್ತು.
ಹೀಗೆ ಹೇಳಿದ್ದು ಬೇರೆ ಯಾರು ಅಲ್ಲ. ಟೀಮ್ ಇಂಡಿಯಾದ ಮಾಜಿ ವೇಗಿ ಕೇರಳ ಎಕ್ಸ್ ಪ್ರೆಸ್ ಖ್ಯಾತಿಯ ಶ್ರೀಶಾಂತ್.
2011ರ ನಂತರ ಟೀಮ್ ಇಂಡಿಯಾ ಐಸಿಸಿ ವಿಶ್ವಕಪ್ ಗೆದ್ದಿಲ್ಲ ಯಾಕೆ ಅನ್ನೋ ಪ್ರಶ್ನೆಗೆ ಶ್ರೀಶಾಂತ್ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
ಆದ್ರೆ 2015ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು ಮಹೇಂದ್ರ ಸಿಂಗ್ ಧೋನಿ ಎಂಬುದನ್ನು ಶ್ರೀಶಾಂತ್ ಮರೆತಿದ್ದಾರೆ.

ಅದೇನೇ ಇರಲಿ, ಶ್ರೀಶಾಂತ್ ಎರಡು ವಿಶ್ವ ಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿದ್ದರು. ಅದರಲ್ಲೂ 2007ರ ಚೊಚ್ಚಲ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಶಾಂತ್ ಅವರು ಪಾಕ್ ನಾಯಕ ಮಿಸ್ಬಾ ಉಲ್ ಹಕ್ ಅವರ ಕ್ಯಾಚ್ ಅನ್ನು ಹಿಡಿಯುತ್ತಿದ್ದಂತೆ ಇಡೀ ಭಾರತೀಯ ಕ್ರಿಕೆಟ್ ಜಗತ್ತು ಹುಚ್ಚೆದ್ದು ಕುಣಿದಾಡಿತ್ತು. ಆ ಕ್ಷಣವನ್ನು ಶ್ರೀಶಾಂತ್ ಎಂದೆಂದಿಗೂ ಮರೆಯುವುದಿಲ್ಲ
ಆದ್ರೆ ನಂತರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ತನ್ನ ಉಜ್ಜಲ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ್ರು. ಶ್ರೀಶಾಂತ್ ಅವರಿಗೆ ಬಿಸಿಸಿಐ ಅಜೀವ ಶಿಕ್ಷೆಯನ್ನು ನೀಡಿತ್ತು. ಈ ಶಿಕ್ಷೆಯಿಂದ ಹೊರಬರಲು ಶ್ರೀಶಾಂತ್ ಕಾನೂನು ಹೋರಾಟ ನಡೆಸಿದ್ರು.

ಅಂತಿಮವಾಗಿ ಅದರಲ್ಲಿ ಯಶ ಕೂಡ ಸಾಧಿಸಿದ್ದರು.
ನಂತರ ಕೇರಳ ರಣಜಿ ತಂಡದಲ್ಲಿ ಆಡುವ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುವ ಪ್ರಯತ್ನ ನಡೆಸಿದ್ದರು. ಆದ್ರೆ ಶ್ರೀಶಾಂತ್ ಗೆ ಕಮ್ ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಹಾಗೇ ಐಪಿಎಲ್ ನಲ್ಲೂ ಅವಕಾಶ ಸಿಗಲಿಲ್ಲ. ಹೀಗಾಗಿ ಕಳೆದ ಮಾರ್ಚ್ ನಲ್ಲಿ ಶ್ರೀಶಾಂತ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ಇದೀಗ ಶೇರ್ ಚಾಟ್ ಕ್ರಿಕ್ ಚಾಟ್ ನಲ್ಲಿ ಮಾತನಾಡಿದ್ದ ಶ್ರೀಶಾಂತ್, ನಾನು 2015, 2019 ಮತ್ತು 2021ರ ವಿಶ್ವಕಪ್ ನಲ್ಲಿ ಅದರಲ್ಲೂ ವಿರಾಟ್ ಸಾರಥ್ಯದ ತಂಡದಲ್ಲಿರುತ್ತಿದ್ರೆ ಟೀಮ್ ಇಂಡಿಯಾ ಮೂರು ವಿಶ್ವಕಪ್ ಗೆಲ್ಲುತ್ತಿತ್ತು ಎಂದು ಹೇಳಿದ್ರು.
ಇನ್ನು ಕ್ರಿಕೆಟ್ ಅಭಿಮಾನಿಗಳ ಜೊತೆಗೆ ಸಂವಾದ ನಡೆಸಿದ್ದ ಶ್ರೀಶಾಂತ್, 2011ರ ವಿಶ್ವಕಪ್ ಟೂರ್ನಿಯ ಗೆಲುವನ್ನು ಸ್ಮರಿಸಿಕೊಂಡ್ರು. ಆ ವಿಶ್ವಕಪ್ ನಾವು ಗೆದ್ದಿರೋದು ಸಚಿನ್ ಗೋಸ್ಕರ ಎಂಬುದನ್ನು ಹೇಳಲು ಮರೆಯಲಿಲ್ಲ.

ಹಾಗೇ ಶ್ರೀಶಾಂತ್ ತನ್ನ ಅದ್ಭುತ ಯಾರ್ಕರ್ ಎಸೆತಗಳಿಗೆ ತುಂಬಾನೇ ಫೇಮಸ್. ನನ್ನ ಕೋಚ್ ಟೆನಿಸ್ ಬಾಲ್ ನಲ್ಲಿ ಯಾರ್ಕರ್ ಎಸೆತಗಳನ್ನು ಹಾಕುವುದು ಹೇಗೆ ಎಂಬುದನ್ನು ನನಗೆ ಕಲಿಸಿಕೊಟ್ಟಿದ್ದರು. ನೀವು ಈಗ ಜಸ್ಪ್ರಿತ್ ಬೂಮ್ರಾ ಅವರಲ್ಲಿ ಕೇಳಿದ್ರೆ ಅವರು ತುಂಬಾ ಸುಲಭ ಅಂತಾರೆ ಎಂದು ಶ್ರೀಶಾಂತ್ ಹೇಳಿದ್ರು.
ಶ್ರೀಶಾಂತ್ ಅವರು ಟೀಮ್ ಇಂಡಿಯಾ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 87 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಅದೇ ರೀತಿ 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್ ಕಬಳಿಸಿದ್ದಾರೆ. 10 ಟಿ-20 ಪಂದ್ಯಗಳಲ್ಲಿ ಶ್ರೀಶಾಂತ್ ಏಳು ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಶ್ರೀಶಾಂತ್ ಟೀಮ್ ಇಂಡಿಯಾದ ಅಪ್ರತಿಮ ಬೌಲರ್ ಆಗಿದ್ದರು. ಎದುರಾಳಿ ಬ್ಯಾಟ್ಸ್ ಮೆನ್ ಗಳ ಜೊತೆಗೆ ಕಿರಿಕ್ ಮಾಡಿಕೊಂಡೇ ವಿಕೆಟ್ ಕಬಳಿಸುತ್ತಿದ್ದರು. ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿದ್ದ ಶ್ರೀಶಾಂತ್ ಅದ್ಭುತವಾಗಿಯೇ ಬೌಲಿಂಗ್ ಮಾಡುತ್ತಿದ್ದರು. ಆದ್ರೆ ಸ್ಪಾಟ್ ಫಿಕ್ಸಿಂಗ್ ಕಳಂಕ ಶ್ರೀಶಾಂತ್ ಅವರ ಕ್ರಿಕೆಟ್ ಬದುಕಿಗೆ ಕಪ್ಪು ಚುಕ್ಕೆ ಮಾತ್ರವಲ್ಲ. ಅವರ ಸಾಧನೆ ಮತ್ತು ಯಶಸ್ಸಿಗೂ ಅಡ್ಡಿಯನ್ನುಂಟು ಮಾಡಿತ್ತು.