ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ ಆತಿಥೇಯ ಶ್ರೀಲಂಕಾ ತಂಡವನ್ನು 34 ರನ್ ಗಳಿಂದ ಮಣಿಸಿ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಡಂಬುಲಾದಲ್ಲಿ ಗುರುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಅನುಭವಿ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಬ್ಬಿನೇನಿ ಮೇಘನಾ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್ ಗೆ ಆರಂಭಿಕ ಶಫಾಲಿ ವರ್ಮಾ ಅವರೊಂದಿಗೆ ಸೇರಿಕೊಂಡ ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡವನ್ನು ಆಘಾತದಿಂದ ಪಾರು ಮಾಡುವ ಹೊಣೆಯನ್ನು ಹೊತ್ತುಕೊಂಡಿತು. ಈ ಜೋಡಿ 34 ಎಸೆತಗಳಲ್ಲಿ 39 ರನ್ ಸೇರಿಸಿ ಆಧಾರವಾಯಿತು. ಶಫಾಲಿ 4 ಬೌಂಡರಿ ಸೇರಿದಂತೆ 31 ರನ್ ಬಾರಿಸಿ ಔಟ್ ಆದರು. ನಾಯಕಿ ಹರ್ಮನ್ ಪ್ರೀತ್ ಕೌರ್ 22 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ (11), ಪೂಜಾ ವಸ್ತ್ರಾಕರ್ (14), ದೀಪ್ತಿ ಶರ್ಮಾ (ಅಜೇಯ 17) ರನ್ ಕಲೆ ಹಾಕಿ ತಂಡಕ್ಕೆ ಆಧಾರವಾದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 27 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 36 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 138 ರನ್ ಸೇರಿಸಿತು.

ಶ್ರೀಲಂಕಾ ಪರ ಇನೋಕಾ ರಣವೀರ ಮೂರು ಹಾಗೂ ಓಷದಿ ರಣಸಿಂಗ್ ಎರಡು ವಿಕೆಟ್ ಪಡೆದರು.

ಶ್ರೀಲಂಕಾ ತಂಡದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ವನಿತೆಯರು ಸಫಲರಾದರು. ಲಂಕಾದ ಮಧ್ಯಮ ಕ್ರಮಾಂಕದ ಆಟಗಾರ್ತಿ ಕವಿಶಾ ದಿಲ್ಹಾರಿ ಅವರು ಅಜೇಯ 47 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಉಳಿದಂತೆ ಚಾಮರಿ ಅತಾಪತ್ತು (16), ಹರ್ಷಿತಾ ಮಾದವಿ (10), ಅಮಾ ಕಾಂಚನಾ (10), ಅನುಷ್ಕಾ ಸಂಜೀವನಿ (ಅಜೇಯ 10) ಟೀಮ್ ಇಂಡಿಯಾದ ಬ್ಯಾಟ್ಸ್ ಮನ್ ಗಳನ್ನು ಕೊಂಚ ಕಾಡಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ಗೆ 104 ರನ್ ಸೇರಿಸಿತು.
ಭಾರತದ ಪರ ರಾಧಾ ಯಾದವ್ 2, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಶಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದರು.