ಆರಂಭದಲ್ಲಿ ನಾಯಕ ಫಾಫ್ ಡುಪ್ಲೇಸಿಸ್, ರಜತ್ ಪಟೀದಾರ್ ಜೋಡಿ ತಂಡಕ್ಕೆ ಆಧಾರವಾದರೆ, ಡೆತ್ ಓವರ್ ಗಳಲ್ಲಿ ದಿನೇಶ್ ಕಾರ್ತಿಕ್ ಅಮೋಘ ಬ್ಯಾಟಿಂಗ್ ನಡೆಸಿದ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು 193 ರನ್ ಗಳ ಗುರಿಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನೀಡಿದೆ.
ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಕಳೆದ ಕೆಲವು ಪಂದ್ಯಗಳಲ್ಲಿ ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಗೆ ಬಲಿಯಾದರು. ಇದು ಪ್ರಸಕ್ತ ಐಪಿಎಲ್ ನಲ್ಲಿ ಕೊಹ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದ್ದರು. ವಿರಾಟ್ ಅವರ ವಿಕೆಟ್ ಕರ್ನಾಟಕದ ಸುಚಿತ್ ಪಾಲಾಯಿತು.

ಬೇಗನೇ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಫಾಫ್ ಡುಪ್ಲೇಸಿಸ್ ಹಾಗೂ ರಜತ್ ಪಟೀದಾರ ಜೋಡಿ ಆಧಾವಾದರು. ಈ ಜೋಡಿ ತಮ್ಮ ನೈಜ ಆಟವಾಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟಿಂಗ್ ನಡೆಸಿತು. ಸಿಕ್ಕ ಅವಕಾಶದಲ್ಲಿ ರನ್ ಕಲೆ ಹಾಕಿದ ಜೋಡಿ ಸನ್ ಬೌಲರ್ ಗಳನ್ನು ಕಾಡಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆರ್‌ಸಿಬಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿತು.

ಈ ಜೋಡಿ ಸುಮಾರು 12 ಓವರ್ ಬ್ಯಾಟಿಂಗ್ ನಡೆಸಿ 105 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ರಜತ್ ಪಟೀದಾರ್ 48 ರನ್ ಬಾರಿಸಿದ್ದಾಗ ಸುಚಿತ್ ಎಸೆತದಲ್ಲಿ ಮಿಡ್ ವಿಕೆಟ್ ನಲ್ಲಿ ತ್ರಿಪಾಠಿಗೆ ಕ್ಯಾಚ್ ನೀಡಿದರು.
ಮೂರನೇ ವಿಕೆಟ್ ಗೆ ಫಾಫ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಡಿ 57 ರನ್ ಸೇರಿಸಿತು. ಗ್ಲೆನ್ ಮ್ಯಾಕ್ಸ್ ವೆಲ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು.

ನಾಯಕ ಫಾಫ್ ಡುಪ್ಲೇಸಿಸ್ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿದರು. ಸನ್ ರೈಸರ್ಸ್ ತಂಡದ ಬಲಿಷ್ಠ ಬೌಲಿಂಗ್ ವಿಭಾಗವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಫಾಫ್ ಅಬ್ಬರಿಸಿದರು. ಫಾಫ್ 50 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 73 ರನ್ ಬಾರಿಸಿ ಮಿಂಚಿದರು.
ಡೆತ್ ಓವರ್ ಗಳಲ್ಲಿ ಬ್ಯಾಟಿಂಗ್ ಗೆ ಬಂದ ದಿನೇಶ್ ಕಾರ್ತಿಕ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 1 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಕೇವಲ 8 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿದರು. ಪರಿಣಾಮ ಆರ್ ಸಿಬಿ 20 ಓವರ್ ಗಳಲ್ಲಿ 3 ವಿಕೆಟ್ ಗೆ 192 ರನ್ ಸೇರಿಸಿತು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಜೆ.ಸುಚಿತ್ ಎರಡು ವಿಕೆಟ್ ಕಬಳಿಸಿದರು.