ಐಪಿಎಲ್-15 ಆವೃತ್ತಿಯ ಕಾರಣಕ್ಕೆ ಬ್ರೇಕ್ ನೀಡಲಾಗಿದ್ದ ಪ್ರಸಕ್ತ ಸೀಸನ್‌ನ ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಸೋಮವಾರದಿಂದ ಚಾಲನೆ ದೊರೆಯಲಿದೆ. ಜೂ.6ರಿಂದ ಆರಂಭಗೊಳ್ಳಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಅತಿಥ್ಯವಹಿಸಲು ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗಿದೆ.
ಪಂದ್ಯಾವಳಿಯ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಎಲೈಟ್ ಗ್ರೂಪ್ಸ್ ಟಾಪರ್ಸ್‌ಗಳು ನಾಕೌಟ್ ಹಂತದಲ್ಲಿ ಹಣಾಹಣಿ ನಡೆಸಲು ಸಜ್ಜಾಗಿವೆ. ಈ ಬಾರಿ ಪಂದ್ಯಾವಳಿಯಲ್ಲಿ ಕರ್ನಾಟಕ, ಬಂಗಾಳ, ಮಧ್ಯಪ್ರದೇಶ, ಮುಂಬೈ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ತಂಡಗಳು ಲೀಗ್ ಹಂತದಿಂದ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರೆ, ನಾಗಾಲ್ಯಾಂಡ್ ವಿರುದ್ಧದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಜಾರ್ಖಂಡ್ ಎಂಟರ ಘಟ್ಟಕ್ಕೆ ಎಂಟ್ರಿ ಪಡೆಯುವಲ್ಲಿ ಯಶಸ್ವಿಯಾಗಿವೆ.
ಕರ್ನಾಟಕಕ್ಕೆ ಯುಪಿ ಸವಾಲು:
ಈ ಬಾರಿಯ ರಣಜಿ ಸೀಸನ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಪ್ರದೇಶದ ಸವಾಲು ಎದುರಿಸಲಿದೆ. ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ನಡೆಯುವ ಪಂದ್ಯಕ್ಕಾಗಿ ತನ್ನದೇ ರಣತಂತ್ರ ರೂಪಿಸಿರುವ ಕರ್ನಾಟಕ, ಟೂರ್ನಿಯ ಮುಂದಿನ ಹಂತಕ್ಕೇರುವ ನಿರೀಕ್ಷೆ ಹೊಂದಿದೆ. ಆದರೆ ಕರ್ನಾಟಕ ತಂಡಕ್ಕೆ ಸ್ಟಾರ್ ಆಟಗಾರರ ಅಲಭ್ಯತೆ ಎದುರಾಗಿದ್ದು, ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ರಣಜಿ ತಂಡಕ್ಕೆ ಅಲಭ್ಯರಾಗಿದ್ದಾರೆ.
ತವರಿನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕೆ.ಎಲ್. ರಾಹುಲ್ ಭಾರತವನ್ನು ಮುನ್ನಡೆಸಲಿದ್ದರೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ್ ಕೃಷ್ಣ ಅವರಿಗೆ ವಿಶ್ರಾಂತಿ ಪಡೆಯಲು ಕೇಳಲಾಗಿದೆ. ಉಳಿದಂತೆ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ರಾಜ್ಯ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.
ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಮಹರಾಷ್ಟ್ರ ವಿರುದ್ಧ ಕೊನೆಯ ಕ್ಷಣದಲ್ಲಿ ಗೆಲುವು ಸಾಧಿಸಿದ ಉತ್ತರ ಪ್ರದೇಶ ನಾಕೌಟ್‌ಗೆ ತಲುಪಿತು. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಿಂಕು ಸಿಂಗ್, ಪ್ರಿಯಮ್ ಗಾರ್ಗ್, ಅಕ್ಷದೀಪ್ ನಾಥ್ ಉತ್ತರ ಪ್ರದೇಶ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ನೀಡಲಿದ್ದಾರೆ. ಇನ್ನೂ ಐಪಿಎಲ್‌ನಲ್ಲಿ ಬೌಲಿಂಗ್‌ನಿಂದ ಮಿಂಚಿದ್ದ ಯಶ್ ದಯಾಲ್, ಮೊಹ್ಸಿನ್ ಖಾನ್ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯಗಳು:
ಬಂಗಾಳ v ಜಾರ್ಖಂಡ್
ಸ್ಥಳ: ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನ, ಬೆಂಗಳೂರು
ಕರ್ನಾಟಕ v ಉತ್ತರ ಪ್ರದೇಶ
ಸ್ಥಳ: ಆಲೂರು ಕ್ರಿಕೆಟ್ ಮೈದಾನ, ಬೆಂಗಳೂರು
ಮುಂಬೈ v ಉತ್ತರಾಖಂಡ
ಸ್ಥಳ: ಆಲೂರು ಕ್ರಿಕೆಟ್ ಮೈದಾನ-2, ಬೆಂಗಳೂರು
ಪಂಜಾಬ್ v ಮಧ್ಯಪ್ರದೇಶ
ಸ್ಥಳ: ಆಲೂರು ಕ್ರಿಕೆಟ್ ಮೈದಾನ-3, ಬೆಂಗಳೂರು