ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಕಟದ ಬ್ಯಾಟ್ಸಮನ್ಗಳ ಅಬ್ಬರ ಮುಂದುವರಿದಿದ್ದು, ಪುದುಚೇರಿ ವಿರುದ್ಧದ ಎಲೈಟ್ ʼಸಿʼ ಗುಂಪಿನ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿರುವ ದೇವದತ್ ಪಡಿಕ್ಕಲ್(161*) ರಣಜಿ ಟ್ರೋಫಿ ಕ್ರಿಕೆಟ್ನ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ.
ಚೆನ್ನೈನ ಶ್ರೀ ಶಿವಸುಬ್ರಹ್ಮಣ್ಯ ನಾದರ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಕರ್ನಾಟಕದ ಪರ ಆರಂಭಿಕನಾಗಿ ಕಣಕ್ಕಿಳಿದ ಎಡಗೈ ಬ್ಯಾಟ್ಸಮನ್ ದೇವದತ್ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದರು. ಎದುರಾಳಿ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಪಡಿಕ್ಕಲ್, ತಮ್ಮ 18ನೇ ರಣಜಿ ಟ್ರೋಫಿ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಅಬ್ಬರಿಸಿದರು.
ತಂಡಕ್ಕೆ ಎದುರಾದ ಆರಂಭಿಕ ಆಘಾತದ ನಡುವೆಯೂ ಜವಾಬ್ದಾರಿಯುತ ಆಟವಾಡಿದ ಪಡಿಕ್ಕಲ್, ಹಂತ ಹಂತವಾಗಿ ತಂಡದ ಮೊತ್ತವನ್ನ ಹೆಚ್ಚಿಸುವ ಮೂಲಕ ಮೊದಲ ದಿನದಾಟದಲ್ಲಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಅದ್ಭುತ ಆಟವಾಡಿದ ಪಡಿಕ್ಕಲ್, 20 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ 161* ರನ್ಗಳಿಸುವ ಮೂಲಕ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
1000 ರನ್ ಗಡಿದಾಟಿದ ಪಡಿಕ್ಕಲ್
ತಮ್ಮ ಅಮೋಘ ಬ್ಯಾಟಿಂಗ್ ಮೂಲಕವೇ ಐಪಿಎಲ್ನಲ್ಲಿ ಮಿಂಚು ಹರಿಸಿದ್ದ ಪಡಿಕ್ಕಲ್, ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವ ಪಡಿಕ್ಕಲ್, ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಜೊತೆಗೆ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ 1000 ರನ್ಗಳ ಗಡಿದಾಟಿದ್ದಾರೆ. 18 ಪಂದ್ಯ 34ನೇ ಇನ್ನಿಂಗ್ಸ್ನಲ್ಲಿ 1000 ರನ್ಗಳಿಸಿರುವ ದೇವದತ್, ರಣಜಿ ಟ್ರೋಫಿಯಲ್ಲಿ ಸಾವಿರ ರನ್ಗಳ ಗಡಿದಾಟಿರುವ 54ನೇ ಆಟಗಾರ ಎನಿಸಿದ್ದಾರೆ.