ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕೆ.ಸಿದ್ಧಾರ್ಥ್ (140*) ಹಾಗೂ ನಾಯಕ ಮನೀಷ್ ಪಾಂಡೆ(156) ಅವರ ಅಮೋಘ ಶತಕದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಚೆನ್ನೈನ ಇಂಡಿಯಾ ಸಿಮೆಂಟ್ ಲಿಮಿಟೆಡ್ ಗುರುನಾನಕ್ ಕಾಲೇಜು ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದ ಮೊದಲ ದಿನದಂದು ಕರ್ನಾಟಕದ ಬ್ಯಾಟ್ಸಮನ್ ಗಳು ಅಮೋಘ ಪ್ರದರ್ಶನ ನೀಡಿದರು. ಜವಾಬ್ದಾರಿಯು ಆಟದಿಂದ ತಂಡಕ್ಕೆ ಆಸರೆಯಾದ ಕೆ. ಸಿದ್ಧಾರ್ಥ್ ಹಾಗೂ ಮನೀಷ್ ಪಾಂಡೆ, ಶತಕ ಸಿಡಿಸಿ ಮಿಂಚಿದರು. ಅಲ್ಲದೇ 4ನೇ ವಿಕೆಟ್ ಜೊತೆಯಾಟದಲ್ಲಿ 267 ರನ್ ಗಳ ಜೊತೆಯಾಟದ ಮೂಲಕ ತಂಡವನ್ನು ಸುಭದ್ರ ಸ್ಥಿತಿಯಲ್ಲಿ ನಿಲ್ಲಿಸಿದರು. ಪರಿಣಾಮ ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ, 5 ವಿಕೆಟ್ ನಷ್ಟಕ್ಕೆ 392 ರನ್ ಗಳ ಬೃಹತ್ ಮೊತ್ತ ಕಲೆಹಾಕಿದ್ದು, ವೈಯಕ್ತಿಕ 140* ರನ್ ಗಳಿಸಿರುವ ಸಿದ್ಧಾರ್ಥ್ ಹಾಗೂ ಶ್ರೇಯಸ್ ಗೋಪಾಲ್(1*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಿದ್ಧಾರ್ಥ್-ಮನೀಷ್ ಅಬ್ಬರ
ಕರ್ನಾಟಕದ ಪರ 4ನೇ ವಿಕೆಟ್ ಗೆ ಜೊತೆಯಾದ ಕೃಷ್ಣಮೂರ್ತಿ ಸಿದ್ಧಾರ್ಥ್ ಹಾಗೂ ನಾಯಕ ಮನೀಷ್ ಪಾಂಡೆ ರೈಲ್ವೇಸ್ ತಂಡದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ, ಆಕರ್ಷಕ ಶತಕ ಬಾರಿಸಿ ಮಿಂಚುವ ಜೊತೆಗೆ 267 ರನ್ ಗಳ ಅದ್ಭುತ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಅದ್ಭುತ ಬ್ಯಾಟಿಂಗ್ ಲಯ ಕಂಡುಕೊಂಡಿದ್ದ ಮನೋಷ್ ಪಾಂಡೆ, ವೈಯಕ್ತಿಕ 156 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ನೀಡಿದ ಸಿದ್ಧಾರ್ಥ್(140*) ರನ್ ಗಳಿಸಿ ಕಣದಲ್ಲಿದ್ದಾರೆ.
ಇದಕ್ಕೂ ಮುನ್ನ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದು ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್(16) ರನೌಟ್ ಬಲೆಗೆ ಬಿದ್ದರೆ. ದೇವದತ್ ಪಡಿಕ್ಕಲ್(21) ಔಟಾಗುವ ಮೂಲಕ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಆದರೆ ನಂತರ ಬಂದ ಆರ್. ಸಮರ್ಥ್(47) ಉಪಯುಕ್ತ ಕಾಣಿಕೆ ನೀಡಿ ತಂಡಕ್ಕೆ ಚೇತರಿಕೆ ನೀಡಿದರೆ, ಶ್ರೀನಿವಾಸ್ ಸಿದ್ಧಾರ್ಥ್(5) ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ರೈಲ್ವೇಸ್ ತಂಡದ ಪರ ಶಿವಂ ಚೌಧರಿ 2 ವಿಕೆಟ್ ಕಬಳಿಸಿದರೆ, ಯುವರಾಜ್ ಸಿಂಗ್ ಹಾಗೂ ಅವಿನಾಶ್ ಯಾದವ್ ತಲಾ 1 ವಿಕೆಟ್ ಪಡೆದರು.