ಭರ್ಜರಿ ಪ್ರದರ್ಶನ ನೀಡುತ್ತಿರುವ ಪಾಟ್ನಾ ಪೈರೇಟ್ಸ್ ತಂಡ ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ಟೂರ್ನಿಯ 132ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮೂರು ಅಂಕಗಳಿಂದ ಮುಣಿಸಿ, ಮೊದಲ ಸ್ಥಾನದಲ್ಲಿ ಭದ್ರವಾಗಿ ನಿಂತಿದೆ.
ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ಪಾಟ್ನಾ ಸೊಗಸಾದ ಆಟದ ಪ್ರದರ್ಶನ ನೀಡಿ 30-27 ಅಂಕಗಳಿಂದ ಸ್ಟೀಲರ್ಸ್ ತಂಡವನ್ನು ಸೋಲಿಸಿತು. ಪಾಟ್ನಾ ಜಯದಲ್ಲಿ ಮೊಹಮ್ಮದ್ರೇಜಾ ಆಕರ್ಷಿಸಿದರು. ಇವರು ಐದು ಟ್ಯಾಕಲ್ ಪಾಯಿಂಟ್ ಪಡೆದು ಅಬ್ಬರಿಸಿದರು. ಇವರನ್ನು ಬಿಟ್ಟರೆ ಸ್ಟಾರ್ ರೈಡರ್ ಸಚಿನ್ 21 ಬಾರಿ ದಾಳಿ ನಡೆಸಿ 8 ಅಂಕ ಕಲೆ ಹಾಕಿದರು.
ಈ ಜಯದ ಮೂಲಕ ಪಾಟ್ನಾ ಆಡಿರುವ 21 ಪಂದ್ಯಗಳಲ್ಲಿ 15ನೇ ಜಯ ದಾಖಲಿಸಿದ್ದು 81 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲೊ ಮೊದಲ ಸ್ಥಾನದಲ್ಲಿದೆ. ಹರಿಯಾಣ 63 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ರೈಡ್ ನಲ್ಲಿ ಉಭಯ ತಂಡಗಳು ಪಂದ್ಯದ ವೇಳೆ ಸ್ಥಿರ ಪ್ರದರ್ಶನ ನೀಡಿದವು. ಪರಿಣಾಮ 40 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು ತಲಾ 12 ಅಂಕ ಪೇರಿಸಿದವು. ಟ್ಯಾಕಲ್ ನಲ್ಲೂ ಇವರು ಹೆಚ್ಚು, ಇವರು ಕಮ್ಮಿ ಎನ್ನುವ ಹಾಗೆ ಕಾಣಲಿಲ್ಲ. ದರೆ ಪಾಟ್ನಾ ಎದುರಾಳಿ ತಂಡಕ್ಕಿಂತ ಒಂದು ಅಂಕ ಮಾತ್ರ ಹೆಚ್ಚಿಗೆ ಪಡೆಯಿತು. ಉಭಯ ತಂಡಗಳು ಮೊದಲಾವಧಿಯಲ್ಲಿ ತಲಾ ಒಂದು ಬಾರಿ ಆಲೌಟ್ ಆದವು.