ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಗೆ ಒಂದು ದಿನ ಮೊದಲು ಟೀಂ ಇಂಡಿಯಾಗೆ ಪೆಟ್ಟು ಬಿದ್ದಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕುಲದೀಪ್ ಯಾದವ್ ಕೂಡ ತಂಡದಿಂದ ಹೊರ ನಡೆದಿದ್ದಾರೆ. ಇದೀಗ ರಿಷಬ್ ಪಂತ್ ಚೊಚ್ಚಲ ಬಾರಿಗೆ ಟೀಂ ಇಂಡಿಯಾ ನಾಯಕನಾಗಲಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ರಾಹುಲ್ ಮತ್ತು ಕುಲದೀಪ್ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಇನ್ನೂ ಪ್ರಕಟವಾಗಿಲ್ಲ.
ಪಂತ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ರಾಹುಲ್ ನಿರ್ಗಮನದೊಂದಿಗೆ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ಆರಂಭಿಸುವ ಸಾಧ್ಯತೆ ಇದೆ. ಈ ಸರಣಿಯನ್ನು ಟಿ20 ವಿಶ್ವಕಪ್ಗೆ ಸಿದ್ಧತೆ ಎಂದು ಪರಿಗಣಿಸಲಾಗಿದೆ. ಸರಣಿಯ ಮೊದಲ ಪಂದ್ಯವು ಗುರುವಾರದಿಂದ ಜೂನ್ 9 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಮಂಗಳವಾರ ನೆಟ್ ಸೆಷನ್ನಲ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಅವರ ಬಲ ತೊಡೆಯ ಕೆಳಭಾಗದಲ್ಲಿ ಗಾಯವಾಗಿದೆ ಎಂದು ಬಿಸಿಸಿಐ ತನ್ನ ಟ್ವೀಟ್ನಲ್ಲಿ ತಿಳಿಸಿದೆ. ಇದರಿಂದಾಗಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಸಂಪೂರ್ಣ ಹೊರಗುಳಿದಿದ್ದರು. ನೆಟ್ಸ್ ವೇಳೆ, ಕುಲದೀಪ್ ಯಾದವ್ ಗೂ ಗಾಯವಾಗಿದೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ರಿಷಬ್ ಪಂತ್ ಭಾರತದ 8ನೇ ನಾಯಕನಾಗಲಿದ್ದಾರೆ. ಇವರಿಗಿಂತ ಮೊದಲು ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಈ ಮಾದರಿಯಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ 42 ನೇ ನಾಯಕನಾಗಲಿದ್ದಾರೆ.
ಭಾರತ ಇದುವರೆಗೆ ಸತತ 12 ಟಿ-20 ಪಂದ್ಯಗಳನ್ನು ಗೆದ್ದು ಪ್ರಸ್ತುತ ಅಫ್ಘಾನಿಸ್ತಾನ ಮತ್ತು ರೊಮೇನಿಯಾಗೆ ಸಮನಾಗಿ ನಿಂತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ, ಸತತ 13 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.