ಢಾಕಾ: ನಿರೀಕ್ಷಿಸಿದಂತೆ ಪ್ರವಾಸಿ ಪಾಕಿಸ್ತಾನ, ಆತಿಥೇಯ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ಎಂಟು ರನ್ ಭರ್ಜರಿ ಜಯ ದಾಖಲಿಸಿದೆ.
ಪಾಕಿಸ್ತಾನ ತಂಡದ ಪ್ರಥಮ ಇನ್ನಿಂಗ್ಸ್ನ 300 ರನ್ಗೆ ಉತ್ತರವಾಗಿ ನಾಲ್ಕನೇ ದಿನದ ಅಂತ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 76 ರನ್ ಮಾಡಿದ್ದ ಬಾಂಗ್ಲಾದೇಶ, ಬುಧವಾರ ಬೆಳಿಗ್ಗೆ ಆಟ ಮುಂದುವರಿಸಿ 87 ರನ್ಗೆ ತನ್ನು ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿತು.
213 ರನ್ ಇನ್ನಿಂಗ್ಸ್ ಲೀಡ್ ಪಡೆದ ಪಾಕಿಸ್ತಾನ, ಬಾಂಗ್ಲಾ ಮೇಲೆ ಫಾಲೋ ಆನ್ ಹೇರಿತು. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಬಾಂಗ್ಲಾ ಆಟಗಾರರು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ.
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ನಲ್ಲಿ 205 ರನ್ಗೆ ಎಲ್ಲ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಾಗೂ ಎಂಟು ರನ್ ಹೀನಾಯ ಸೋಲು ಅನುಭವಿಸಿತು.
ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ 63 (130 ಎಸೆತ, 9 ಬೌಂಡರಿ), ಮುಶ್ಪಿಕರ್ ರಹೀಮ್ 48 (136 ಎಸೆತ, 3 ಬೌಂಡರಿ) ಹಾಗೂ ಲಿಟನ್ ದಾಸ್ 45 (81 ಎಸೆತ, 7೭ ಬೌಂಡರಿ) ರನ್ ಮಾಡಿದರೂ ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನ ಪರ ಸಾಜೀದ್ ಖಾನ್ 86 ಕ್ಕೆ ನಾಲ್ಕು, ಶಾಹೀನ್ ಅಫ್ರಿದಿ 31 ಕ್ಕೆ ಎರಡು, ಹಸನ್ ಅಲಿ 37೭ ಕ್ಕೆ ಎರಡು ಹಾಗೂ ಬಾಬರ್ ಅಜಮ್ ಒಂದು ವಿಕೆಟ್ ಕಬಳಿಸಿದರು.
ಪಾಕಿಸ್ತಾನದ ಸಾಜೀದ್ ಖಾನ್ ಪಂದ್ಯ ಶ್ರೇಷ್ಠ ಹಾಗೂ ಅಬಿದ್ ಅಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.