Pakistan Cricket -ರಮೀಝ್ ರಾಜಾ ಅವರಿಗೆ ಕುರ್ಚಿ ಮೇಲೆ ಜಾಸ್ತಿ ಪ್ರೀತಿ – ಮಹಮ್ಮದ್ ಅಮೀರ್

ಮಹಮ್ಮದ್ ಅಮೀರ್. ಪಾಕಿಸ್ತಾನದ ಘಾತಕ ವೇಗಿ. ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದ್ರೆ ಈಗಲೂ ಕೂಡ ಪಾಕಿಸ್ತಾನದ ಖಾಯಂ ವೇಗಿಯಾಗಬಹುದಿತ್ತು. ಆದ್ರೆ ಸ್ಪಾಟ್ ಫಿಕ್ಸಿಂಗ್ ಆರೋಪ, ಐದು ವರ್ಷ ನಿಷೇಧ, ಆನಂತರ ಕಮ್ ಬ್ಯಾಕ್ ಮಾಡಿದ್ರೂ ಪಾಕ್ ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಅನ್ಯಾಯವಾಗುತ್ತಿದೆ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ತನ್ನ 28ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಕ್ರಿಕೆಟಿಗ ಮಹಮ್ಮದ್ ಅಮೀರ್. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ರೂ ಮಹಮ್ಮದ್ ಅಮೀರ್ ಗ್ಲೋಬಲ್ ಪ್ಲೇಯರ್. ಟಿ-20 ಲೀಗ್ ಟೂರ್ನಿಗಳಲ್ಲಿ ಆಡುತ್ತಿರುವ ಅಮೀರ್ ಬೇಡಿಕೆಯ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಮಹಮ್ಮದ್ ಅಮೀರ್ ಅವರು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಮೀಝ್ ರಾಜಾ ವಿರುದ್ಧವೇ ಹೇಳಿಕೆಯನ್ನು ನೀಡಿದ್ದಾರೆ.

ರಮೀಝ್ ರಾಜಾ ಅವರ ನಿಲುವು ಬೇರೆಯವರಿಗಾಗಿ ಬದಲಾಗುವುದಿಲ್ಲ. ಆದ್ರೆ ಈ ನಿಯಮ ಅವರಿಗೆ ಮಾತ್ರ ಅನ್ವಯವಾಗುವುದಿಲ್ಲ ಎಂದು ಮಹಮ್ಮದ್ ಅಮೀರ್ ಹೇಳಿಕೆ ನೀಡಿದ್ದಾರೆ.
ಈ ಹಿಂದಿನ ಅವರ ವಿಡಿಯೋಗಳನ್ನು ಬೇಕಾದ್ರೆ ನೋಡಿ. ಪಾಕ್ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಮರುಕ್ಷಣವೇ ನಾನು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ರಮೀಝ್ ರಾಜಾ ಹೇಳಿದ್ದರು. ಆದ್ರೆ ರಮೀಜ್ ರಾಝಾ ಹೇಳಿದಂತೆ ಮಾಡಿದ್ದಾರಾ ? ಅವರು ಎಂದಿಗೂ ತನ್ನ ಕುರ್ಚಿಯನ್ನು ಬಿಟ್ಟುಕೊಡುವುದಿಲ್ಲ. ಎಲ್ಲರು ಕೂಡ ಪವರ್ ಫುಲ್ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ. ಎಂಜಾಯ್ ಮಾಡಿ ಎಂದು ಮಹಮ್ಮದ್ ಅಮೀರ್ ಹೇಳಿದ್ದಾರೆ.
ಮಹಮ್ಮದ್ ಅಮೀರ್ ಈ ರೀತಿ ಹೇಳಿಕೆ ನೀಡಿರುವುದಕ್ಕೆ ಕಾರಣವೂ ಇದೆ.
ಈ ಹಿಂದೆ ಮಹಮ್ಮದ್ ಅಮೀರ್ ಅವರು ನಿವೃತ್ತಿ ಘೋಷಣೆ ಮಾಡಿದ್ದಾಗ ಬಹಿರಂಗವಾಗಿಯೇ ಟೀಕೆಗಳನ್ನು ಮಾಡಿದ್ದರು. ಪಾಕ್ ಕ್ರಿಕೆಟ್ ನಿಂದ ನನಗೆ ಅನ್ಯಾಯವಾಗುತ್ತಿದೆ. ತಾರತಮ್ಯ ನಡೆಸಲಾಗುತ್ತದೆ ಎಂದು ಮಿಸ್ಬಾ ಉಲ್ ಹಕ್ ಮತ್ತು ವಕಾರ್ ಯೂನಿಸ್ ವಿರುದ್ಧವೇ ಆರೋಪ ಮಾಡಿದ್ದರು.
ಬಳಿಕರಮೀಝ್ ರಾಜಾ ಅವರು ಪಿಸಿಬಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾಗ ಮತ್ತೆ ಕ್ರಿಕೆಟ್ ಆಡುವ ಆಸೆಯನ್ನು ಮಹಮ್ಮದ್ ಅಮೀರ್ ವ್ಯಕ್ತಪಡಿಸಿದ್ದರು. ಯಾಕಂದ್ರೆ ರಮೀಝ್ ರಾಜಾ ಮತ್ತು ಮಹಮ್ಮದ್ ಅಮೀರ್ ನಡುವಿನ ಬಾಂಧವ್ಯವೂ ಚೆನ್ನಾಗಿತ್ತು. ಹೀಗಾಗಿ ಮಹಮ್ಮದ್ ಅಮೀರ್ ಮತ್ತೆ ಪಾಕ್ ತಂಡದ ಪರವಾಗಿ ಆಡುವ ಸಾಧ್ಯತೆಗಳಿದ್ದವು. ಆದ್ರೆ ಈಗ ಆ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ. ಯಾಕಂದ್ರೆ ರಮೀಝ್ ರಾಜಾ ಅವರಿಗೆ ಬೆಂಬಲವಾಗಿ ನಿಲ್ಲಲು ಪ್ರಧಾನಿ ಇಮ್ರಾನ್ ಖಾನ್ ಇಲ್ಲ. ಆದ್ರೆ ಕೊಟ್ಟ ಮಾತಿನಂತೆ ರಮೀಜ್ ರಾಝಾ ತನ್ನ ಪಿಸಿಬಿ ಅಧ್ಯಕ್ಷ ಹುದ್ದೆಯನ್ನು ಬಿಟ್ಟುಕೊಟ್ಟಿಲ್ಲ.
ಇನ್ನು ಪಿಸಿಬಿ ಅಧಿಕಾರಿಗಳು ಕ್ರಿಕೆಟ್ ಗೆ ಮತ್ತೆ ಮರಳುವ ಬಗ್ಗೆ ಏನಾದ್ರೂ ಮಾತನಾಡಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ಮಹಮ್ಮದ್ ಅಮೀರ್, ನನ್ನ ಮತ್ತು ರಮೀಝ್ ರಾಜಾ ಅವರ ಸಂಬಂಧ ತುಂಬಾ ಹಳೆಯದ್ದು. ಅದು ಯಾವತ್ತಿಗೂ ಕೊನೆಗೊಳ್ಳುವುದಿಲ್ಲ. ರಮೀಜ್ ರಾಝಾ ಪಿಸಿಬಿ ಅಧ್ಯಕ್ಷರಾದ ಬಳಿಕ ನಾನು ನಿವೃತ್ತಿಯನ್ನು ವಾಪಸ್ ಪಡೆಯುವ ಯೋಚನೆ ಮಾಡಿದ್ದೆ. ಅದರಲ್ಲೇ ಊಹೆ ಮಾಡಿಕೊಳ್ಳಿ ನಮ್ಮ ಸಂಬಂಧ ಎಂಥವುದ್ದು ಎಂದು. ಆದ್ರೆ ಈಗ ರಮೀಝ್ ರಾಜಾ ಅವರಿಗೆ ಕುರ್ಚಿ ಮೇಲೆ ಪ್ರೀತಿ ಬಂದಿದೆ. ಅದನ್ನು ಎಂಜಾಯ್ ಮಾಡಲಿ ಎಂದು ಮಹಹಮ್ಮದ್ ಅಮೀರ್ ಹೇಳಿದ್ದಾರೆ.