ಯೇ ದೋಸ್ತಿ ಹಮ್ ನಹೀ ತೊಡೆಂಗೆ.- ಪಾಕ್ ನಾಯಕ ಬಾಬರ್ ಅಝಮ್ ಧ್ಯೇಯ ಮಂತ್ರ…!
ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮೀಸ್ ನಲ್ಲಿ ಸೋತ ಪಾಕಿಸ್ತಾನ ತಂಡ ಆಘಾತ ಅನುಭವಿಸಿದೆ. ಅದ್ರಲ್ಲೂ ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಕೈಚೆಲ್ಲಿದ್ದ ಹಸನ್ ಆಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೇ ಹ್ಯಾಟ್ರಿಕ್ ಸಿಕ್ಸರ್ ಹೊಡೆಸಿಕೊಂಡ ಶಾಹೀನ್ ಆಫ್ರಿದಿ ವಿರುದ್ಧವೂ ಟೀಕೆಗಳು ಕೇಳಿಬರುತ್ತಿವೆ.
ಈ ನಡುವೆ ಪಾಕ್ ತಂಡ ಸೋಲಲು ಮುಖ್ಯ ಕಾರಣವಾಗಿದ್ದು ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಕೈಚೆಲ್ಲಿದ್ದು. ಹಾಗಂತ ಸ್ವತಃ ಪಾಕ್ ನಾಯಕ ಬಾಬರ್ ಅಝಮ್ ಕೂಡ ಹೇಳಿಕೊಂಡಿದ್ದರು.
ಆದ್ರೆ ಡ್ರೆಸಿಂಗ್ ರೂಂ ನಲ್ಲಿ ಪಾಕ್ ನಾಯಕ ಬಾಬರ್ ಅಝಮ್ ತಂಡವನ್ನು ಹುರಿದುಂಬಿಸಿದ್ದ ರೀತಿಯೇ ಬೇರೆಯದ್ದೇ ಆಗಿತ್ತು. ಪಂದ್ಯದ ನಂತರ ಬಾಬರ್ ಅಝಮ್ ಅವರು ತನ್ನ ಆಟಗಾರರ ಜೊತೆ ಟೀಮ್ ಟಾಕ್ ನಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಹೌದು, ಬಾಬರ್ ಟೀಮ್ ಟಾಕ್ ನಲ್ಲಿನ ಹೇಳಿದ್ದು ಇಷ್ಟು.. ಯೇ ದೋಸ್ತಿ ಹಮ್ ನಹೀ ತೊಡೆಂಗೆ.. ಈ ಸ್ನೇಹವನ್ನು ನಾವು ಕಳೆದುಕೊಳ್ಳಬಾರದು ಎನ್ನುವ ಮೂಲಕ ತಾನೊಬ್ಬ ಉತ್ತಮ ಲೀಡರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈ ಸೋಲಿನಿಂದ ಪ್ರತಿಯೊಬ್ಬರು ನೋವನ್ನು ಅನುಭವಿಸಿದ್ದಾರೆ. ಎಲ್ಲಿ ತಪ್ಪು ಮಾಡಿದ್ದೇವೆ.. ಎಲ್ಲಿ ಸರಿಪಡಿಸಿಕೊಳ್ಳಬೇಕಿತ್ತು ಎಂಬುದು ಈ ಸೋಲಿನ ನೋವಿನಲ್ಲೂ ಪ್ರತಿಯೊಬ್ಬರಿಗೆ ಗೊತ್ತಾಗಿದೆ. ಇದನ್ನು ನಮಗೆ ಯಾರು ಹೇಳುವ ಅಗತ್ಯವಿಲ್ಲ. ಅದೆಲ್ಲಾ ನಮಗೆ ತಿಳಿದಿದೆ. ಹಾಗಾಗಿ ನಾವು ಒಂದು ತಂಡವಾಗಿ ಇರಬೇಕು. ಅದನ್ನು ಯಾವತ್ತೂ ಮುರಿದುಕೊಳ್ಳಬಾರದು ಅಂತ ಬಾಬರ್ ಅಝಮ್ ಹೇಳಿದ್ದಾರೆ.
ಇನ್ನು ಈ ಸೋಲಿಗೆ ಯಾರನ್ನು ಹೊಣೆಯಾಗಿಸುವುದು ಬೇಡ. ಯಾರ ಮೇಲೂ ಬೊಟ್ಟು ಮಾಡಿ ತೋರಿಸುವುದು ಬೇಡ. ಈ ಸಂಬಂಧ ಕೇವಲ ಒಂದು ಸೋಲಿಗೆ ಕೊನೆಯಾಗಬಾರದು. ಇದು ಒಬ್ಬರಿಗೊಬ್ಬರು ಸಹಾಯ ಮಾಡುವ ಸಮಯ. ಪ್ರತಿಯೊಬ್ಬರು ಗೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಬಾಬರ್ ಹೇಳಿಕೊಂಡಿರುವ ವಿಡಿಯೋವನ್ನು ಪಾಕ್ ಕ್ರಿಕೆಟ್ ಮಂಡಳಿಯು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದೆ.
Babar Azam, Saqlain Mushtaq and Matthew Hayden are proud of their side despite a five-wicket defeat in #T20WorldCup semi-final. pic.twitter.com/kAem5PrWjj
— Pakistan Cricket (@TheRealPCB) November 11, 2021
ಇದೇ ವೇಳೆ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಕೂಡ ತಂಡಕ್ಕೆ ಸ್ಪೂರ್ತಿ ನೀಡುವ ಮಾತನ್ನು ಹೇಳಿದ್ದಾರೆ.
ಅಂದ ಹಾಗೇ ಪಾಕ್ ಒಂದು ತಂಡವಾಗಿ ಆಡಿದ್ದು ಬಹುಶಃ ಇದೇ ಮೊದಲ ಬಾರಿ ಅನ್ಸುತ್ತೆ. ಈ ಹಿಂದೆ ಆಟಗಾರರ ತಮ್ಮೊಳಗೆ ಜಗಳ ಮಾಡಿಕೊಂಡಿರುವಂತಹ ಘಟನೆಗಳು ಸಾಕಷ್ಟಿವೆ. ಆದ್ರೆ ಬಾಬರ್ ಅಝಮ್ ಸಾರಥ್ಯದ ಪಾಕ್ ತಂಡ ಮೈದಾನದ ಹೊರಗಡೆ ಮತ್ತು ಮೈದಾನದೊಳಗೆ ಒಗ್ಗಟ್ಟಿನಿಂದ ಆಡಿದೆ ಎಂಬುದು ಸುಳ್ಳಲ್ಲ.