P.V.Sindhu – ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದೆ: ಸಿಂಧು- ನ್ಯಾಷನಲ್ ಗೇಮ್ಸ್ ಆಡದಿದ್ದರೂ ಕ್ರೀಡಾಕೂಟ ವೀಕ್ಷಿಸಿದ ಸಿಂಧು
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಾಜಿ ವಿಶ್ವ ಚಾಂಪಿಯನ್, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಾವು ಕಾಲು ಮುರಿದಿದ್ದರೂ ಚಿನ್ನ ಗೆದ್ದಿದ್ದು ಹೇಗೆ ಎನ್ನುವ ರೋಚಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಛಲವಿದ್ದರೆ ನೋವಿನಲ್ಲೂ ಹೋರಾಟ ನಡೆಸಲು ಸಾಧ್ಯವಿದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಗುಜರಾತ್‌ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆಡಲು ಕಣಕ್ಕಿಳಿಯದಿದ್ದರೂ ಕ್ರೀಡಾಕೂಟ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಿಂಧು, ಬ್ಯಾಡ್ಮಿಂಟನ್ ಆಟಗಾರರು ಮಾತ್ರವಲ್ಲದೇ ಅನೇಕ ಬೇರೆ ಬೇರೆ ಕ್ರೀಡೆಗಳ ಆಟಗಾರರ ಜೊತೆ ತಮ್ಮ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು.
ಈ ಬಗ್ಗೆ ಮಾಧ್ಯಮಗಳ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಸಿಂಧು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ‘ನ್ಯಾಷನಲ್ ಗೇಮ್ಸ್‌ನಲ್ಲಿ ಆಡಬೇಕು ಎಂದು ಬಹಳ ಆಸೆ ಇತ್ತು. ಆದರೆ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕಣಕ್ಕಿಳಿದಿದ್ದರೆ ಗಾಯದ ಪ್ರಮಾಣ ಹೆಚ್ಚುವ ಸಾಧ್ಯತೆ ಇತ್ತು’ ಎಂದರು. ‘ಈ ಕ್ರೀಡಾಕೂಟವು ಅನೇಕ ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯಾಗಲಿದೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಜೊತೆ ಸ್ಪರ್ಧಿಸುವ ಅವಕಾಶ ಸಿಗುವ ಕಾರಣ ಉತ್ಕೃಷ್ಟ ಮಟ್ಟದಲ್ಲಿ ಸ್ಪರ್ಧೆ ಹೇಗಿರಲಿದೆ. ತಾವೆಷ್ಟು ಸುಧಾರಣೆ ಕಾಣಬೇಕು ಎನ್ನುವುದು ಯುವ ಕ್ರೀಡಾಪಟುಗಳಿಗೆ ತಿಳಿಯಲಿದೆ’ ಎಂದು ಹೇಳಿದರು.
ತಮ್ಮ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಜರ್ನಿ ಬಗ್ಗೆ ಮಾತನಾಡಿದ ಸಿಂಧು, ‘ಕ್ವಾರ್ಟರ್ ಫೈನಲ್ ತಲುಪಿದ ಸಂದರ್ಭದಲ್ಲಿ ಎಡ ಮೊಣಕಾಲಿನ ನೋವು ಹೆಚ್ಚಾಯಿತು. ನನಗೆ ಗಾಯದ ಪ್ರಮಾಣ ದೊಡ್ಡದಿದೆ ಎಂದು ಗೊತ್ತಾಗಿರಲಿಲ್ಲ. ಹಿಂದಿನ ಆವೃತ್ತಿಗಳಲ್ಲಿ ಕಂಚು ಹಾಗೂ ಬೆಳ್ಳಿ ಗೆದ್ದಿದ್ದ ನನಗೆ ಚಿನ್ನದ ಪದಕವೇ ಬೇಕಿತ್ತು. ಅದೇ ಛಲದೊಂದಿಗೆ ಆಡಿ ಗೆದ್ದೆ. ಭಾರತಕ್ಕೆ ವಾಪಸಾದ ಬಳಿಕ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು. ಆಗ ಸಣ್ಣ ಮಟ್ಟದ ಮುರಿತವಾಗಿರುವುದು ಕಂಡುಬಂತು. ಈಗ ಚೇತರಿಕೆ ಕಾಣುತ್ತಿದ್ದೇನೆ. ಆದಷ್ಟು ಬೇಗ ಅಂಕಣಕ್ಕೆ ಮರಳುವ ವಿಶ್ವಾಸವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2022ರಲ್ಲಿ ಕಾಮನ್‌ವೆಲ್ತ್ ಚಿನ್ನ, 3 ಪ್ರಶಸ್ತಿಗಳನ್ನು ಗೆದ್ದಿರುವ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದರಂತೆ. ಪ್ರಮುಖವಾಗಿ ತಮ್ಮ ನೆಚ್ಚಿನ ಎದುರಾಳಿ ಜಪಾನ್‌ನ ಅಕನೆ ಯಮಗುಚಿ ವಿರುದ್ಧ ಆಡಲು ಎದುರು ನೋಡುತ್ತಿದ್ದಾಗಿ ಅವರು ಹೇಳಿಕೊಂಡರು. ಆದರೆ ಗಾಯದ ಕಾರಣ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ಗೆ ಗೈರಾದರು. 2019ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಸಿಂಧು, ಈ ವರೆಗೂ ಒಟ್ಟು 5 ಪದಕ ಗೆದ್ದಿದ್ದಾರೆ.
ಗುಜರಾತ್‌ನಲ್ಲಿ ಮೂಲಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಂಧು, ಬ್ಯಾಡ್ಮಿಂಟನ್ ಅಂಕಣಗಳು ವಿಶ್ವ ದರ್ಜೆಯದ್ದಾಗಿವೆ. ಜಾಗತಿಕ ಮಟ್ಟದ ಪಂದ್ಯಾವಳಿಗಳನ್ನು ಗುಜರಾತ್ ಆಯೋಜಿಸುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯಪಟ್ಟರು.