ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಬಿಸಿಸಿಐ ಭಾರತ(Team India) ತಂಡವನ್ನ ಕಳುಹಿಸದಿದ್ದರೆ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್(ODI World Cup) ಬಹಿಷ್ಕರಿಸುವುದಾಗಿ ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ಼(Ramiz Raja) ಹೇಳಿಕೆಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದನೀಶ್ ಕನೇರಿಯಾ(Danish Kaneria) ವ್ಯಂಗ್ಯವಾಡಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ(Asian Cricket Council) ಕಾರ್ಯಕಾರಿ ಮಂಡಳಿ ನಿರ್ಧಾರದ ಪ್ರಕಾರ 2023ರ ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಈ ನಿರ್ಧಾರಕ್ಕೆ ಸಮ್ಮತಿ ನೀಡದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಲು ಭಾರತ ಆದ್ಯತೆ ನೀಡುತ್ತದೆ ಎಂದು ಹೇಳಿದ್ದರು. ಆದರೆ ಬಿಸಿಸಿಐನ ಈ ತೀರ್ಮಾನಕ್ಕೆ ಪ್ರತಿಕ್ರಿಯೆ ನೀಡಿದ್ದ ರಮೀಜ್ ರಾಜಾ಼, 2023ರ ಏಷ್ಯಾಕಪ್ ಪಂದ್ಯಾವಳಿಗೆ ಭಾರತ ತಂಡವನ್ನ ಪಾಕಿಸ್ತಾನ ಕಳುಹಿಸದಿದ್ದರೆ ಪಾಕಿಸ್ತಾನ ತಂಡವು 50 ಓವರ್‌ಗಳ ವಿಶ್ವಕಪ್‌ಗಾಗಿ ಭಾರತಕ್ಕೆ ಹೋಗುವುದಿಲ್ಲ ಎಂದಿದ್ದರು.
ಆದರೆ ರಮೀಜ್ ರಾಜಾ಼ ಅವರ ಈ ಹೇಳಿಕೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಲೇವಡಿ ಮಾಡಿದ್ದಾರೆ. ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ಼ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಪಂದ್ಯಾವಳಿಯನ್ನು ಬಹಿಷ್ಕರಿಸುವ ಧೈರ್ಯ ಹೊಂದಿಲ್ಲ. ಒಂದೊಮ್ಮೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡರು ಅದರಿಂದ ಪಾಕಿಸ್ತಾನಕ್ಕೆ ನಷ್ಟವೇ ಹೊರತು, ಭಾರತಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಏಕೆಂದರೆ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುತ್ತದೆಯೇ ಅಥವಾ ಇಲ್ಲವೇ ಎಂದು ಬಿಸಿಸಿಐ ಯಾವುದೇ ಕಾರಣಕ್ಕೂ ಚಿಂತಿಸುವುದಿಲ್ಲ.
ಐಸಿಸಿ ಪಂದ್ಯಾವಳಿಯನ್ನ ಬಹಿಷ್ಕರಿಸುವಷ್ಟು ಧೈರ್ಯ ಪಿಸಿಬಿಗೆ ಇಲ್ಲ. ಮತ್ತೊಂದೆಡೆ, ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸದಿದ್ದರೂ ಭಾರತ ಆ ಬಗ್ಗೆ ಹೆದರುವುದಿಲ್ಲ. ಏಕೆಂದರೆ ಭಾರತ ಸಾಕಷ್ಟು ಆದಾಯವನ್ನು ಗಳಿಸುವ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಹೀಗಾಗಿ ಪಾಕಿಸ್ತಾನ ತಂಡದ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ಹೋಗದಿರುವುದರಿಂದ ಪಾಕಿಸ್ತಾನದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ಅಲ್ಲದೇ ಅಂತಿಮವಾಗಿ ಪಾಕಿಸ್ತಾನ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭಾರತಕ್ಕೆ ಪ್ರಯಾಣಿಸಲಿದೆ. ಐಸಿಸಿಯಿಂದ ಒತ್ತಡವಿದ್ದ ಕಾರಣ ಅವರಿಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಒಂದು ವೇಳೆ ಪಾಕಿಸ್ತಾನ ತಂಡ ಐಸಿಸಿ ಪಂದ್ಯಾವಳಿಯಿಂದ ಹೊರಗುಳಿಯುವ ಬಗ್ಗೆ ಪದೇ ಪದೇ ಮಾತನಾಡಿದರೆ ಇದರಿಂದ ಪಾಕಿಸ್ತಾನ ಕ್ರಿಕೆಟ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.