ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಪೂರ್ಣಗೊಳಿಸಿವ ನ್ಯೂಜಿ಼ಲೆಂಡ್, ಈ ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯಲಿರುವ 2022-23ನೇ ಸಾಲಿನ ಬ್ಲಾಕ್ ಬಸ್ಟರ್ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ತವರಿನಲ್ಲಿ ಪಾಕಿಸ್ತಾನ್, ಬಾಂಗ್ಲಾದೇಶ್ ವಿರುದ್ಧ ತ್ರಿಕೋನ ಸರಣಿಯನ್ನು ಆಡಲಿದೆ.
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಕಿವೀಸ್ ಪಡೆ ತವರಿನಲ್ಲಿ ರೋಹಿತ್ ಶರ್ಮ ಸಾರಥ್ಯದ ಟೀಂ ಇಂಡಿಯಾವನ್ನ ಎದುರಿಸಲಿದೆ. ಈ ಸರಣಿಯಲ್ಲಿ ಭಾರತ ಹಾಗೂ ನ್ಯೂಜಿ಼ಲೆಂಡ್ ತಂಡಗಳು 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನ ಆಡಲಿದ್ದು, ಟಿ20 ವಿಶ್ವಕಪ್ ಮುಗಿದ ನಾಲ್ಕು ದಿನಗಳ ಬಳಿಕ ಅಂದರೆ, ನವೆಂಬರ್ 14ರಿಂದ ಈ ಸರಣಿ ಆರಂಭವಾಗಲಿದೆ. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಭಾರತದ ವಿರುದ್ಧ ನಿರೀಕ್ಷಿತ ಸಕ್ಸಸ್ ಕಾಣದ ನ್ಯೂಜಿ಼ಲೆಂಡ್ ಟೆಸ್ಟ್ ಹಾಗೂ ವೈಟ್ ಬಾಲ್ ಕ್ರಿಕೆಟ್ ನಲ್ಲಿ ಹಿನ್ನಡೆ ಅನುಭವಿಸಿದೆ.
ಭಾರತ ಹಾಗೂ ನ್ಯೂಜಿ಼ಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಯು ನವೆಂಬರ್ 18ರಿಂದ ಆರಂಭವಾಗಲಿದ್ದು, ವೆಲ್ಲಿಂಗ್ಟನ್, ಟೌರಂಗ ಹಾಗೂ ನೇಪಿಯರ್ ನಲ್ಲಿ ನಡೆಯಲಿದೆ. ಇದಾದ ನಂತದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ನವೆಂಬರ್ 25ರಿಂದ 30ರವರೆಗೆ ನಡೆಯುವ ಈ ಪಂದ್ಯಗಳು ಆಕ್ಲೆಂಡ್, ಹ್ಯಾಮಿಲ್ಟನ್ ಹಾಗೂ ಕ್ರೈಸ್ಟ್ ಚೆರ್ಚ್ ನಲ್ಲಿ ನಡೆಯಲಿದೆ.

ಇದಲ್ಲದೇ ನ್ಯೂಜಿ಼ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ 2 ಟೆಸ್ಟ್ ಪಂದ್ಯಗಳ ಸರಣಿ ಸಹ ನಡೆಯಲಿದ್ದು, ಈ ಸರಣಿಯು 2023ರ ಫೆಬ್ರವರಿಯಲ್ಲಿ ನಡೆಯಲಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕಿವೀಸ್ ಪಡೆ ಪಾಕಿಸ್ತಾನ್ ಹಾಗೂ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಬಳಿಕ ಮಾರ್ಚ್ ಶ್ರೀಲಂಕಾ ವಿರುದ್ಧ 2 ಟೆಸ್ಟ್, 3 ODI ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನ ಸಹ ಆಡಲಿದೆ.