ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಬುಧವಾರದಿಂದ ಆರಂಭವಾದ ರಣಜಿ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನ ಮುಂಬೈ ದಿನದ ಗೌರವಕ್ಕೆ ಪಾತ್ರವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕ ಪೃಥ್ವಿ ಶಾ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮಧ್ಯ ಪ್ರದೇಶದ ಬೌಲರ್ ಗಳ ರಣ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿತು. ಅಲ್ಲದೆ 27.4 ಓವರ್ ಗಳಲ್ಲಿ 87 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ನಾಯಕ ಪೃಥ್ವಿ ಶಾ 47 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಆಟಗಾರ ಅರ್ಮಾನ್ ಜಾಫರ್ (26), ಸುವೇದ್ ಪರ್ಕರ್ (18) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ನಾಲ್ಕನೇ ವಿಕೆಟ್ ಗೆ ಯಶಸ್ವಿ ಜೈಸ್ವಾಲ್ ಹಾಗೂ ಸರ್ಫರಾಜ್ ಖಾನ್ ಜೊತೆಗೂಡಿ 37 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ 78 ರನ್ ಗಳಿಗೆ ಔಟ್ ಆದರು. ಇವರ ಅಮೋಘ ಇನ್ನಿಂಗ್ಸ್ ನಲ್ಲಿ 7 ಬೌಂಡರಿ, 1 ಸಿಕ್ಸರ್ ಸೇರಿವೆ.
ಹಾರ್ದಿಕ್ ತೋಮರ್ 24 ರನ್ ಗಳಿಗೆ ಆಟ ಮುಗಿಸಿದರು.

ಎರಡನೇ ದಿನಕ್ಕೆ ಸರ್ಫರಜಾ ಖಾನ್ ಅಜೇಯ 40 ಹಾಗೂ ಶಾಮ್ಸ್ ಮುಲಾನಿ ಅಜೇಯ 12 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುಂಬೈ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತದ ಕನಸು ಕಾಣುತ್ತಿದೆ.
ಮಧ್ಯಪ್ರದೇಶದ ಪರ ಅನುಭವ್ ಅಗರ್ ವಾಲ್ ಹಾಗೂ ಸರನ್ಶ ಜೈನ್ ತಲಾ ಎರಡು ವಿಕೆಟ್ ಕಬಳಿಸಿದರು.