Maharaja Trophy: ನಿಹಾಲ್ ಮಿಂಚು, ಕ್ವಾಲಿಫೈಯರ್ ಗೆ ಮೈಸೂರು ಕ್ವಾಲಿಫೈ
ಬೆಂ ಭರವಸೆಯ ಆಟಗಾರ ನಿಹಾಲ್ ಉಳ್ಳಾಲ್ ಅವರು ಬಾರಿಸಿದ ಅಜೇಯ ಅರ್ಧಶತಕ ಬಾರಿಸಿದ ನೆರವಿನಿಂದ ಮೈಸೂರು ವಾರಿಯರ್ಸ್ 5 ವಿಕೆಟ್ ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ ಕ್ವಾಲಿಫೈಯರ್ 2ಗೆ ಪ್ರವೇಶ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 166 ರನ್ ಸೇರಿಸಿ ಜಯ ಸಾಧಿಸಿತು.
ಮಹಾರಾಜ ಟ್ರೋಫಿಯ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ನ ಆರಂಭಿಕ ಆಟಗಾರರಾದ, ನಾಯಕ ಲವ್‌ನೀತ್ ಸಿಸೋಡಿಯಾ (33) ಮತ್ತು ಮೊಹಮ್ಮದ ತಾಹ (27) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ 6 ಓವರ್‌ಗಳಲ್ಲಿ 56 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಆದರೆ ಅನುಭವಿ ಲೆಗ್‌ಬ್ರೇಕ್ ಬೌಲರ್ ಶ್ರೇಯಸ್ ಗೋಪಾಲ್ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಆ ಬಳಿಕ ಟೈಗರ್ಸ್‌ನ ರನ್ ಗಳಿಕೆಯಲ್ಲಿ ಇಳಿಮುಖ ಕಂಡು ಬಂತು.
ಅಬ್ಬರದ ಆಟ ಪ್ರದರ್ಶಿಸಬಲ್ಲ ಲಿಯಾನ್ ಖಾನ್ (7) ಹಾಗೂ ಶಿವಕುಮಾರ್ (6) ಅನುಕ್ರಮವಾಗಿ ಪ್ರತೀಕ್ ಜೈನ್ ಹಾಗೂ ಶುಭಾಂಗ್ ಹೆಗ್ಡೆ ಬೌಲಿಂಗ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇದರೊಂದಿಗೆ ಹುಬ್ಬಳ್ಳಿಯ ರನ್ ಸರಾಸರಿ ಮತ್ತೆ ಕುಸಿಯಿತು. ತುಷಾರ್ ಸಿಂಗ್ ಕೂಡ ಶ್ರೇಯಸ್ ಬೌಲಿಂಗ್‌ನಲ್ಲಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಹುಬ್ಬಳ್ಳಿ ಟೈಗರ್ಸ್‌ನ ಇನ್ನಿಂಗ್ಸ್ ಗೆ ಮತ್ತೆ ಜೀವ ತುಂಬಿದ್ದು ವಿಗ್ನೇಶ್ವರ್ ನವೀನ್ (32) ಮತ್ತು ಸ್ವಪ್ನಿಲ್ ಯಳವೆ (30*) ನವೀನ್ ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭದ ನಾಯಕ ಅಭಿಮನ್ಯು ಮಿಥುನ್ (19) ತಾಳ್ಮೆಯ ಆಟವಾಡಿ ತಂಡಕ್ಕೆ ತಮ್ಮದೆ ಆದ ಕೊಡುಗೆ ನೀಡಿದರು.

ಹುಬ್ಬಳ್ಳಿ ಟೈಗರ್ಸ್‌ನ ಆರಂಭವನ್ನು ಕಂಡಾಗ ಇನ್ನೂರರ ಗಡಿದಾಟಬಹುದು ಎಂಬ ಲಕ್ಷಣ ತೋರಿತ್ತು. ಆದರೆ ಶ್ರೇಯಸ್ ಗೋಪಾಲ್ ಆ ನಿರೀಕ್ಷೆಯನ್ನು ಹುಸಿಗೊಳಿಸಿದರು. ಶ್ರೇಯಸ್ 33 ರನ್ ನೀಡಿ ಅಮೂಲ್ಯ 3 ವಿಕೆಟ್ ಗಳಿಸಿದರೆ, ಪ್ರತೀಕ್ ಜೈನ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ ಹಾಗೂ ಅದಿತ್ಯ ಗೋಯಲ್ ತಲಾ 1 ವಿಕೆಟ್ ಗಳಿಸಿದರು.
165 ರನ್‌ಗಳ ಜಯದ ಗುರಿಯನ್ನು ಹೊತ್ತ ಮೈಸೂರು ವಾರಿಯರ್ಸ್ ಕೊನೆಯ ಕ್ಷಣದಲ್ಲಿ ಆನಂದ್ ದೊಡ್ಡಮನಿ ಅವರ ಬೌಲಿಂಗ್ ದಾಳಿಗೆ ಸಿಲುಕಿ ಲಗುಬಬನೆ 3 ವಿಕೆಟ್ ಕಳೆದುಕೊಂಡರೂ, ಆತಂಕಕ್ಕೆ ಅವಕಾಶ ಮಾಡಿಕೊಡದೆ ಇನ್ನೂ 5 ಎಸೆತ ಬಾಕಿ ಇರುವಾಗಲೇ 5 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ಬೌಲಿಂಗ್‌ನಲ್ಲಿ ಮಿಂಚಿದ್ದ ಶ್ರೇಯಸ್ ಗೋಪಾಲ್ ಬ್ಯಾಟಿಂಗ್‌ನಲ್ಲೂ ಪ್ರಭುತ್ವ ಸಾಧಿಸಿ ಕೇವಲ 19 ಎಸೆತಗಳಲ್ಲಿ 32 ರನ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ನಿಹಾಲ್ ಉಳ್ಳಾಲ್ 58 ಎಸೆತಗಳನ್ನು ಎದುರಿಸಿ, 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 77 ರನ್ ಗಳಿಸಿ ಜಯದ ರೂವಾರಿ ಎನಿಸಿದರು. ಮೈಸೂರು ವಾರಿಯರ್ಸ್ ತಂಡ ಮುಂದಿನ ಪಂದ್ಯದಲ್ಲಿ ಕ್ವಾಲಿಫಯರ್ 1ರಲ್ಲಿ ಸೋಲನುಭವಿಸುವ ತಂಡದ ವಿರುದ್ಧ ಫೈನಲ್ ಸ್ಥಾನಕ್ಕಾಗಿ ಹೋರಾಟ ನಡೆಸಲಿದೆ.
ಸಂಕ್ಷಿಪ್ತ ಸ್ಕೋರ್:
ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164
(ಲವ್‌ನೀತ್ ಸಿಸೋಡಿಯಾ 33, ಮೊಹಮ್ಮದ್ ತಾಹ 27, ಸ್ವಪ್ನಿಲ್ 30*, ವಿಗ್ನೇಶ್ವರ್ 32)
ಮೈಸೂರು ವಾರಿಯರ್ಸ್ 19.1 ಓವರ್‌ಗಳಲ್ಲಿ 5 ವಿಕೆಟ್‌ಗೆ 166
(ನಿಹಾಲ್ ಉಳ್ಳಾಲ್ 77*, ಕರುಣ್ ನಾಯರ್ 23, ಪವನ್ ದೇಶಪಾಂಡೆ 24, ಶ್ರೇಯಸ್ ಗೋಪಾಲ್ 32, ದೊಡ್ಡಮನಿ ಆನಂದ 27ಕ್ಕೆ 4)
Maharaja Trophy, Mysuru Warriors, Hubli Tigers