ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಟಗಾರ ಉತ್ತಮ ಪ್ರದರ್ಶನ ಮುಂದುವರೆದಿದೆ. ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧು ಅವರು ಶುಭಾರಂಭ ಮಾಡಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-15, 21-14 ರಿಂದ ಅಮೆರಿಕಾದ ಲಾರೆನ್ ಲಾಮ್ ವಿರುದ್ಧ 34 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿದರು. ಎರಡು ಒಲಿಂಪಿಕ್ಸ್ ವಿಜೇತೆ ಸಿಂಧು ಪಂದ್ಯದಲ್ಲಿ ಸೊಗಸಾದ ಪ್ರದರ್ಶನ ನೀಡಿ ಮುಂದಿನ ಸುತ್ತು ಪ್ರವೇಶಿಸಿದರು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ 22-20, 21-11 ರಿಂದ ಮಲೇಷ್ಯಾದ ಲಿವ್ ಡೇರೆನ್ ವಿರುದ್ಧ 40 ನಿಮಿಷದ ಕಾದಾಟದಲ್ಲಿ ಜಯ ಸಾಧಿಸಿದರು. ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಪಂದ್ಯದಲ್ಲಿ ಮಲೇಷ್ಯಾ ಆಟಗಾರ ಆರಂಭದಲ್ಲಿ ಮುನ್ನಡೆ ಸಾಧಿಸಿದರು. ಆದರೆ ಪಂದ್ಯದ ಕೊನೆಯ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದ ಶ್ರೀಕಾಂತ್ ಜಯ ಸಾಧಿಸಿದರು. ಎರಡನೇ ಗೇಮ್ ನಲ್ಲಿ ಶ್ರೀಕಾಂತ್ ಅಮೋಘ ಆಟದ ಪ್ರದರ್ಶನ ನೀಡಿ ಗೆದ್ದು ಬೀಗಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಎಂ.ಆರ್.ಅರ್ಜುನ್ ಹಾಗೂ ಧೃವ್ ಕಪಿಲ ಅವರು ವಾಕ್ ಓವರ್ ಪಡೆದರು. ಇನ್ನೊಂದು ಪಂದ್ಯದಲ್ಲಿ ಸಾತ್ವಿಕ್ ಸಾಯ್ ರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮುನ್ನಡೆ ಸಾಧಿಸಿದ್ದಾರೆ. ಮಿಶ್ರ ಡಬಲ್ಸ್ ನಲ್ಲಿ ಸುಮಿತ್ ರೆಡ್ಡಿ, ಅಶ್ವಿನಿ ಪೊನ್ನಪ್ಪ ಸಹ ಮುಂದಿನ ಹಂತಕ್ಕೆ ಪ್ರವೇಶಿಸಿದರು.