ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರು ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ 21-15, 21-10 ರಿಂದ ಜಪಾನ್ ನ ಆಯಾ ಹೋರಿ ಅವರನ್ನು 37 ನಿಮಿಷಗಳ ಹೋರಾಟದಲ್ಲಿ ಮಣಿಸಿ ಮುನ್ನಡೆ ಸಾಧಿಸಿದರು.
ಮೊದಲ ಗೇಮ್ ನಲ್ಲಿ ಜಪಾನ್ ಆಟಗಾರ್ತಿ 8-7 ರಿಂದ ಮುನ್ನಡೆ ಸಾಧಿಸಿದ್ದರು. ಬಳಿಕ ಸಿಂಧು ಅವರು ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದರು. ಎರಡನೇ ಗೇಮ್ ನಲ್ಲಿ ಸತತ 10 ಅಂಕಗಳನ್ನು ಕಲೆ ಹಾಕಿದ ಸಿಂಧು ಎಂಟರ ಘಟ್ಟಕ್ಕೆ ಪ್ರವೇಶಿಸಿದರು.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ 21-18, 21-6 ರಿಂದ ರಷ್ಯಾದ ಮಿಶಾ ಜಿಲ್ಬರ್ಮನ್ ವಿರುದ್ಧ 33 ನಿಮಿಷಗಳ ಕಾದಾಟದಲ್ಲಿ ಜಯ ಸಾಧಿಸಿದರು.
ಇನ್ನೊಂದು ಪಂದ್ಯದಲ್ಲಿ ಲಕ್ಷ್ಯ ಸೇನ್ 20-22, 9-21 ರಿಂದ ಶೇಸರ್ ಹಿರೇನ್ ರುಸ್ತಾವಿಟೊ ವಿರುದ್ಧ 33 ನಿಮಿಷಗಳ ಹೋರಾಟದಲ್ಲಿ ನಿರಾಸೆ ಅನುಭವಿಸಿದರು. ಥೈಲ್ಯಾಂಡ್ ನ ಪೋರ್ನ್ಪಾವೀ ಚೋಚುವಾಂಗ್ ವಿರುದ್ಧ ಮಾಳ್ವಿಕಾ ಬನ್ಸೋದ್ ನಿರಾಸೆ ಅನುಭವಿಸಿದರು. ಪ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಮಾಳ್ವಿಕಾ 8-21, 14-21 ರಿಂದ ಆಘಾತ ಅನುಭವಿಸಿದರು. ಮಿಶ್ರ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಸುಮಿತ್ ರೆಡ್ಡಿ ಜೋಡಿ ಸೋಲು ಕಂಡಿತು.