ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತದ ಸ್ಟಾರ್ ಆಟಗಾರರಾದ ಕಿಡಂಬಿ ಶ್ರೀಕಾಂತ್ ಹಾಗೂ ಎರಡು ಬಾರಿ ಒಲಿಂಪಿಕ್ಸ್ ವಿಜೇತೆ ಪಿ.ವಿ ಸಿಂಧು ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಅಮೋಘ ಪ್ರದರ್ಶನ ನೀಡಿದರು. ಒಂದು ಗಂಟೆ ಎರಡು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀ ದಕ್ಷಿಣ ಕೊರಿಯಾ ಆಟಗಾರನ ತಂತ್ರವನ್ನು ಮೆಟ್ಟಿ ನಿಂತರು. ಮೊದಲ ಗೇಮ್ ಸುಲಭವಾಗಿ ಗೆದ್ದಿದ್ದ ಶ್ರೀ, ಎರಡನೇ ಗೇಮ್ ನಲ್ಲಿ ನಿರಾಸೆ ಅನುಭವಿಸಿದರು. ಆದರೆ ನಿರ್ಣಾಯಕ ಗೇಮ್ ನಲ್ಲಿ ಸೊಗಸಾದ ಪ್ರದರ್ಶನ ನೀಡಿದ ಶ್ರೀಕಾಂತ್ ಜಯ ಸಾಧಿಸಿದರು. ಶ್ರೀ 21-12, 18-21, 21-12 ರಿಂದ ದಕ್ಷಿಣ ಕೊರಿಯಾ ಸನ್ ವಾನ್ ಹೋ ವಿರುದ್ಧ ಜಯ ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ ಎಂಟರ ಘಟ್ಟದ ಪಂದ್ಯದಲ್ಲಿ ಪಿ.ವಿ ಸಿಂಧು ಅಬ್ಬರದ ಆಟ ಪ್ರದರ್ಶಿಸಿದರು. ಇವರು 21-10, 21-16 ರಿಂದ ಥಾಯ್ಲೆಂಡ್ ನ ಬುಸಾನನ್ ಒಂಗ್ ಬಮ್ರುಂಗ್ಫಾನ್ ಅವರನ್ನು ಮಣಿಸಿ ಸೆಮಿಫೈನಲ್ಸ್ ಗೆ ಪ್ರವೇಶಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿ ರೆಡ್ಡಿ, ಚಿರಾಗ್ ಶೆಟ್ಟಿ ಜೋಡಿ ದಕ್ಷಿಣ ಕೊರಿಯಾ ಆಟಗಾರರ ವಿರುದ್ಧ ಸೋಲು ಕಂಡರು.