ಶ್ರೀಕಾಂತ್ ಶುಭಾರಂಭ
ಒಡೆನ್ಸ್ ದಲ್ಲಿ ನಡೆಯುತ್ತಿರುವ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ 17-21, 21-14, 21-12 ರಿಂದ ಹಾಂಕಾಂಗ್ ನ ಲಾಂಗ್ ಆಂಗಸ್ ವಿರುದ್ಧದ 56 ನಿಮಿಷಗಳ ಪಂದ್ಯದಲ್ಲಿ ಜಯ ಸಾಧಿಸಿ ಮಂದಿನ ಸುತ್ತು ಪ್ರವೇಶಿಸಿದರು. ಇವರೆಗೆ ಶ್ರೀಕಾಂತ್ ಹಾಗೂ ಲಾಂಗ್ ಆಂಗಸ್ ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು, ಶ್ರೀ 4ರಲ್ಲಿ ಜಯ ಸಾಧಿಸಿದ್ದಾರೆ.
ಮೊದಲ ಗೇಮ್ ನ ಆರಂಭದಿಂದಲೂ ಲಾಂಗ್ ಆಂಗಸ್ ಅವರು ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಅಲ್ಲದೆ ಶ್ರೀಕಾಂತ್ ಗೆ ಈ ಪಂದ್ಯದ ಯಾವುದೇ ಹಂತದಲ್ಲೂ ಮುನ್ನಡೆ ಬಿಟ್ಟು ಕೊಡಲಿಲ್ಲ. ಆದರೆ ಎರಡನೇ ಗೇಮ್ ನ ಪ್ರಥಮಾರ್ಧದವರೆಗೂ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ ನಂತರ ಲಯ ಕಂಡುಕೊಂಡ ಶ್ರೀಕಾಂತ್ ಅಮೋಘ ಉತ್ತಮ ಆಟದ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿ ಗೇಮ್ ತಮ್ಮದಾಗಿಸಿಕೊಂಡರು.
ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಶ್ರೀ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿ ಸುಲಭವಾಗಿ ಪಂದ್ಯ ಗೆದ್ದರು.
ಉಳಿದಂತೆ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ 21-15, 21-15 ರಿಂದ ಡೆನ್ಮಾರ್ಕ್ ನ ಅಲೆಕ್ಸಾಂಡ್ರಾ ಬಾಜೆ, ಅಮಾಲಿ ಮೆಗೆಲುಂಡ್ ವಿರುದ್ಧ ನೇರ ಸೆಟ್ ಗಳಲ್ಲಿ ಜಯ ಸಾಧಿಸಿ ಮುನ್ನಡೆದರು. ಈ ಜೋಡಿ ಕೇವಲ 35 ನಿಮಿಷಗಳ ಹೋರಾಟದಲ್ಲಿ ಜಯ ಸಾಧಿಸಿತು.
Kidambi Srikanth, Denmark Open, Badminton