ಭಾರತ ಮಹಿಳಾ ತಂಡದ ಅನುಭವಿ ಆಟಗಾರ್ತಿ ಹಾಗೂ ಪ್ರಮುಖ ಬೌಲರ್ ಜೂಲನ್ ಗೋಸ್ವಾಮಿ, ಏಕದಿನ ಕ್ರಿಕೆಟ್ನಲ್ಲಿ 250 ವಿಕೆಟ್ಗಳನ್ನು ಪಡೆಯುವ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ನ್ಯೂಜಿ಼ಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ಮಹಿಳಾ ವಿಶ್ವಕಪ್-2022ರ ಪಂದ್ಯಾವಳಿಯಲ್ಲಿ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಅವರ ವಿಕೆಟ್ ಪಡೆಯುವ ಮೂಲಕ 250 ವಿಕೆಟ್ಗಳ ಮೈಲಿಗಲ್ಲನ್ನು ದಾಟಿದರು. ಆ ಮೂಲಕ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದರು.
ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜೂಲನ್ ಗೋಸ್ವಾಮಿ ಅಗ್ರ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್ 180 ವಿಕೆಟ್ ಮತ್ತು ವೆಸ್ಟ್ ಇಂಡೀಸ್ನ ಅನಿಸಾ ಮೊಹಮ್ಮದ್ 180 ವಿಕೆಟ್ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಇಂಗ್ಲೆಂಡ್ನ ಕ್ಯಾಥರೀನ್ ಬ್ರಂಟ್ ಕ್ರಮವಾಗಿ 168 ಮತ್ತು 164 ವಿಕೆಟ್ಗಳನ್ನು ಪಡೆದು ನಂತರದ ಸ್ಥಾನದಲ್ಲಿದ್ದಾರೆ.
ಮಹಿಳಾ ಕ್ರಿಕೆಟ್ನಲ್ಲಿ ತಮ್ಮದೇ ದಾಖಲೆ ಹೊಂದಿರುವ 39 ವರ್ಷದ ಜೂಲನ್ ಗೋಸ್ವಾಮಿ, ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ಕೀರ್ತಿ ಹೊಂದಿದ್ದರು. ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಎನಿಸಿರುವ ಗೋಸ್ವಾಮಿ, 2005ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿ ಜೂಲನ್ ಗೋಸ್ವಾಮಿ ಅವರ 5ನೇ ವಿಶ್ವಕಪ್ ಟೂರ್ನಿಯಾಗಿದೆ.