Jasprit Bumrah-ನೆಟ್ಟಿಗರ ಕಮೆಂಟ್ ಗಳ ಮೇಲೆ ಭೂಮ್ರ ಪ್ರತಿಕ್ರಿಯೆ
Jasprit Bumrah – ಬೊಗಳುವ ನಾಯಿಗೆ ಕಲ್ಲು ಹೊಡೆದ್ರೆ ಗುರಿ ಮಟ್ಟಲು ಆಗಲ್ಲ – ಜಸ್ಪ್ರಿತ್ ಬೂಮ್ರಾ…!

ಟೀಮ್ ಇಂಡಿಯಾ ಆಟಗಾರರು ಐಸಿಸಿ ಟಿ-20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಒಬ್ಬ ಆಟಗಾರ ಮಾತ್ರ ಮಿಸ್ ಮಾಡಿಕೊಂಡಿದ್ದಾರೆ.
ಹೌದು, ಜಸ್ಪ್ರಿತ್ ಬೂಮ್ರಾ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಜಸ್ಪ್ರಿತ್ ಬೂಮ್ರಾ ಅವರು ಸಾಕಷ್ಟು ನಿರಾಸೆ ಅನುಭವಿಸಿದ್ದಾರೆ.
ಸದ್ಯ ಜಸ್ಪ್ರಿತ್ ಬೂಮ್ರಾ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಸ್ಪ್ರಿತ್ ಬೂಮ್ರಾ ಅವರ ಅನುಪಸ್ಥಿತಿ ಟೀಮ್ ಇಂಡಿಯಾದ ಮೇಲೆ ಗಾಢವಾದ ಪರಿಣಾಮ ಬೀರಲಿದೆ. ಅದರಲ್ಲೂ ಡೆತ್ ಓವರ್ ಗಳಲ್ಲಿ ಜಸ್ಪ್ರಿತ್ ಬೂಮ್ರಾ ಅವರ ಗೈರು ಎದುರಾಳಿ ತಂಡಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಈಗಾಗಲೇ ಜಸ್ಪ್ರಿತ್ ಬೂಮ್ರಾ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಆಯ್ಕೆ ಸಮಿತಿಗಿದೆ. ಈ ನಡುವೆ, ಬೂಮ್ರ ಸ್ಥಾನಕ್ಕೆ ಶಮಿ ಸೂಕ್ತ ಆಯ್ಕೆ ಎಂಬ ವಿಚಾರವನ್ನು ರಾಹುಲ್ ದ್ರಾವಿಡ್ ಪರೋಕ್ಷವಾಗಿ ಹೇಳಿದ್ದಾರೆ. ಆದ್ರೆ ಶಮಿ ಕೂಡ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ದೀಪಕ್ ಚಾಹರ್ 15ರ ಬಳಗದಲ್ಲಿ ಕಾಣಿಸಿಕೊಂಡ್ರೂ ಅಚ್ಚರಿ ಪಡಬೇಕಾಗಿಲ್ಲ.
ಈ ನಡುವೆ, ಜಸ್ಪ್ರಿತ್ ಬೂಮ್ರಾ ಮೇಲೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ದೀಗ ಬೂಮ್ರಾ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಜಸ್ಪ್ರಿತ್ ಬೂಮ್ರಾ ರಾಷ್ಟ್ರೀಯ ತಂಡದಿಂದ ಹೊರಬಂದಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಮುಂಬೈ ಫ್ರಾಂಚೈಸಿ ತಂಡಕ್ಕೆ ಲಭ್ಯರಾಗುತ್ತಾರೆ ಎಂದು ನೆಟ್ಟಿಗರು ಕಮೆಂಟ್ ಗಳನ್ನು ಹಾಕಿದ್ದಾರೆ. ಇದಕ್ಕೆ ಕಾರಣವೂ ಇದೆ. 2019ರಿಂದ ಜಸ್ಪ್ರಿತ್ ಬುಮ್ರಾ ಅವರು ಐಪಿಎಲ್ ನ 60 ಪಂದ್ಯಗಳಲ್ಲಿ 59 ಪಂದ್ಯಗಳನ್ನು ಆಡಿದ್ದಾರೆ. ಅದೇ ರೀತಿ ಇದೇ ಅವಧಿಯಲ್ಲಿ ಟೀಮ್ ಇಂಡಿಯಾ 70 ಪಂದ್ಯಗಳನ್ನು ಆಡಿದೆ. ಇದರಲ್ಲಿ ಬೂಮ್ರಾ ಆಡಿದ್ದು 16 ಪಂದ್ಯಗಳನ್ನು ಮಾತ್ರ.
ಆದ್ರೆ ನೆಟ್ಟಿಗರ ಕಮೆಂಟ್ ಗಳಿಂದ ಬೂಮ್ರಾ ಕುಪಿತಗೊಂಡಿದ್ದಾರೆ. ಬೊಗಳುವ ಪ್ರತಿ ನಾಯಿಗೆ ಕಲ್ಲು ಹೊಡೆಯುತ್ತಿದ್ರೆ ನೀವು ಎಂದಿಗೂ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಜಸ್ಪ್ರಿತ್ ಬೂಮ್ರಾ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ತೀಕ್ಷ್ಣವಾಗಿ ಬರೆದುಕೊಂಡಿದ್ದಾರೆ.