ಟಿ20 ವಿಶ್ವಕಪ್ ನಡೆಯುತ್ತಿರುವಾಗಲೇ ಮುಂದಿನ ಐಪಿಎಲ್ ಆಕ್ಷನ್ ಬಗ್ಗೆ ಚರ್ಚೆ ಶುರುವಾಗಿದೆ. ಲಖ್ನೋ ಮತ್ತು ಅಹಮದಾಬಾದ್ ಐಪಿಎಲ್ ತಂಡಗಳ ಸೇರ್ಪಡೆಯಿಂದ ಆಟಗಾರರಿಗೆ ದೊಡ್ಡ ಲಾಭವಾಗುವ ನಿರೀಕ್ಷೆ ಇದೆ. ವಿದೇಶಿ ಆಟಗಾರರು ಮತ್ತು ದೇಶೀಯ ಕ್ರಿಕೆಟರ್ಗಳು ಹೊಸ ಅವಕಾಶವನ್ನು ಪೆಯಬಹುದು. ಈ ಮಧ್ಯೆ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸಲು ಸ್ಟಾರ್ ಆಟಗಾರರೇ ಉತ್ಸಾಹ ತೋರುತ್ತಿದ್ದಾರೆ.
ಐಪಿಎಲ್ ರಿಟೆನ್ಶನ್ ನಿಯಮದ ಪ್ರಕಾರ ಈಗಿರುವ 8 ಫ್ರಾಂಚೈಸಿಗಳು ತಲಾ 4 ಆಟಗಾರರನು ಉಳಿಸಿಕೊಳ್ಳಬಹುದು. ಹೊಸ 2 ಫ್ರಾಂಚೈಸಿಗಳು ಹರಾಜಿಗೂ ಮುನ್ನ ಫ್ರಾಂಚೈಸಿಗಳು ಕೈ ಬಿಡುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಈಗ ಸ್ಟಾರ್ ಆಟಗಾರರು ಹರಾಜಿಗೆ ಹೋಗುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಹರಾಜಿನಲ್ಲಿ ಅತೀ ಹೆಚ್ಚು ಮಾರಾಟವಾಗುವುದರ ಜೊತೆಗೆ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳುವ ನಿರ್ಧಾರದಲ್ಲಿದ್ದಾರೆ.
ಲಖ್ನೋ ಮತ್ತು ಅಹಮದಾಬಾದ್ ತಂಡಗಳಿಗೆ ನಾಯಕರ ಅವಶ್ಯಕತೆ ಇದೆ. ವಿರಾಟ್ ಕೊಹ್ಲಿ ಆರ್ಸಿಬಿ ನಾಯಕತ್ವ ಬಿಟ್ಟಿರುವುದರಿಂದ ಆರ್ಸಿಬಿ ಕೂಡ ನಾಯಕನ ಹುಡುಕಾಟದಲ್ಲಿದೆ. ಇದು ಸ್ಟಾರ್ ಆಟಗಾರರ ಗಮನದಲ್ಲಿದೆ. ಮೂಲಗಳ ಪ್ರಕಾರ ಆರ್ಸಿಬಿ ಪಂಜಾಬ್ ತಂಡ ಕೆ.ಎಲ್. ರಾಹುಲ್ರನ್ನು ಕೈ ಬಿಟ್ಟರೆ ಅವರನ್ನೇ ನಾಯಕನಾಗಿ ಮಾಡುವ ಪ್ಲಾನ್ನಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಅಯ್ಯರ್ ಮತ್ತು ಮುಂಬೈ ಇಂಡಿಯನ್ಸ್ನ ಹಾರ್ದಿಕ್ ಪಾಂಡ್ಯಾ ಹರಾಜಿನತ್ತ ಗಮನ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಸ ತಂಡಗಳಿಗೆ ನಾಯಕರಾಗುವ ಕನಸು ಈ ಆಟಗಾರರಿಗೆ ಇದೆ ಎಂದು ಹೇಳಲಾಗುತ್ತಿದೆ.
2022ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂದು ವರದಿಗಳು ತಿಳಿಸಿವೆ. ಐಪಿಎಲ್ 2021ರ ಪ್ಲೇ ಆಫ್ಸ್ವರೆಗೂ ಡೆಲ್ಲಿ ತಂಡವನ್ನು ನಾಯಕ ರಿಷಬ್ ಪಂತ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಡೆಲ್ಲಿಯ ಮಾಜಿ ನಾಯಕ ಅಯ್ಯರ್ಗೆ ಕ್ಯಾಪ್ಟನ್ ಪಟ್ಟವಿಲ್ಲ. ನಾಯಕತ್ವದ ನಿರಿಕ್ಷೆಯಲ್ಲಿರುವ ಶ್ರೇಯಸ್ ಅಯ್ಯರ್ ಡೆಲ್ಲಿ ತಂಡ ಬಿಟ್ಟು ದೊಡ್ಡ ಹರಾಜಿಗೆ ಲಭ್ಯರಿದ್ದಾರೆ ಎನ್ನಲಾಗಿದೆ. ಶ್ರೇಯಸ್ 2019ರಲ್ಲಿ ದೆಹಲಿ ತಂಡವನ್ನು ಪ್ಲೇ-ಆಫ್ ಹಾಗೂ 2020ರಲ್ಲಿ ಫೈನಲ್ಗೆ ಕೊಂಡೊಯ್ದಿದ್ದರು. ಹೀಗಾಗಿ ನಾಯಕತ್ವದ ನಿರೀಕ್ಷೆಯಲ್ಲಿರುವ ಶ್ರೇಯಸ್ ಹೊಸ ಫ್ರಾಂಚೈಸಿಯ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಐಪಿಎಲ್ನ 2 ಹೊಸ ಫ್ರಾಂಚೈಸಿಗಳು ಹಲವು ಆಟಗಾರರಿಗೆ ಹೊಸ ಭವಿಷ್ಯದ ಜೊತೆ ಕೋಟ್ಯಾಧೀಶರಾಗಲು ಅನುಕೂಲ ಮಾಡಿಕೊಡುವುದು ಗ್ಯಾರೆಂಟಿ.