ವೆಂಕಟೇಶ್ ಅಯ್ಯರ್(104) ಅವರ ಭರ್ಜರಿ ಶತಕದ ನಡುವೆಯೂ ಇಶಾನ್ ಕಿಶನ್(58) ಹಾಗೂ ಸೂರ್ಯಕುಮಾರ್ ಯಾದವ್(43) ಅವರ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಕೊಲ್ಕತ್ತಾ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ಗಳ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ರೈಡರ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 185 ರನ್ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 17.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ಗಳಿಸುವ ಮೂಲಕ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಮುಂಬೈ ಟೂರ್ನಿಯಲ್ಲಿ ತನ್ನ 2ನೇ ಗೆಲುವು ಸಾಧಿಸಿದರೆ. ಕೊಲ್ಕತ್ತಾ 3ನೇ ಸೋಲಿನ ಆಘಾತ ಅನುಭವಿಸಿತು.
ವೆಂಕಟೇಶ್ ಶತಕದ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿತು. ಇನ್ನಿಂಗ್ಸ್ ಆರಂಭಿಸಿದ ಗುರ್ಬಾಜ಼್(8) ಹಾಗೂ ಜಗದೀಸನ್(0) ಬಹುಬೇಗನೆ ಪೆವಿಲಿಯನ್ ಸೇರಿದರು. ನಂತರದಲ್ಲಿ ಬಂದ ನಿತೀಶ್ ರಾಣ(5), ಥಾಕೂರ್(13), ರಿಂಕು ಸಿಂಗ್(18) ನಿರೀಕ್ಷಿತ ಆಟವಾಡುವಲ್ಲಿ ವಿಫಲವಾದರು. ಆದರೆ ಒಂದೆಡೆ ವಿಕೆಟ್ಗಳು ಬೀಳುತ್ತಿದ್ದರು 1ನೇ ಕ್ರಮಾಂಕದಲ್ಲಿ ಬಂದ ವೆಂಕಟೇಶ್ ಅಯ್ಯರ್(104 ರನ್, 51 ಬಾಲ್, 6 ಬೌಂಡರಿ, 9 ಸಿಕ್ಸ್) ಜವಾಬ್ದಾರಿಯ ಆಟವಾಡಿದರು.
ಗಾಯದ ಸಮಸ್ಯೆ ನಡುವೆಯೂ ಅಮೋಘ ಆಟವಾಡಿದ ವೆಂಕಟೇಶ್, ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಇದು ಈ ಬಾರಿಯ ಐಪಿಎಲ್ನಲ್ಲಿ ದಾಖಲಾದ ಎರಡನೇ ಶತಕವಾಗಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವೆಂಕಟೇಶ್ ಅಯ್ಯರ್ ಅವರಿಗೆ ಕೆಳ ಕ್ರಮಾಂಕದಲ್ಲಿ ಬಂದ ಆಂಡ್ರೆ ರಸೆಲ್(21*) ಬಿರುಸಿನ ಆಟದಿಂದ ಸಾಥ್ ನೀಡಿದರು. ಪರಿಣಾಮ ಕೆಕೆಆರ್ 20 ಓವರ್ಗಳಲ್ಲಿ 6 ವಿಕೆಟ್ಗೆ 185 ರನ್ಗಳಿಸಿತು. ಮುಂಬೈ ಪರ ಶೊಕೆನ್ 2, ಗ್ರೀನ್, ಜೆನ್ಸನ್, ಮೆರೆಡಿತ್ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು. ಆದರೆ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಅರ್ಜುನ್ ತೆಂಡುಲ್ಕರ್ ಯಾವುದೇ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದರು.
ಮುಂಬೈ ಸಂಘಟಿತ ಆಟ:
ಕೆಕೆಆರ್ ನೀಡಿದ 186 ರನ್ಗಳ ಪೈಪೋಟಿಯ ಮೊತ್ತವನ್ನ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಸಂಘಟಿತ ಪ್ರದರ್ಶನ ನೀಡಿದರು. ಆರಂಭಿಕರಾಗಿ ಬಂದ ರೋಹಿತ್ ಶರ್ಮ(20) ಹಾಗೂ ಇಶಾನ್ ಕಿಶನ್(58) 1ನೇ ವಿಕೆಟ್ಗೆ 65 ರನ್ಗಳಿಸಿ ಉತ್ತಮ ಆರಂಭ ನೀಡಿದರು. ಸ್ಪೋಟಕ ಆಟವಾಡಿದ ಕಿಶನ್ ಕೇವಲ 25 ಬಾಲ್ಗಳಲ್ಲಿ 5 ಬೌಂಡರಿ, 5 ಸಿಕ್ಸ್ ಬಾರಿಸಿ ಅರ್ಧಶತಕ ಬಾರಿಸಿದರು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್(43) ಹಾಗೂ ತಿಲಕ್ ವರ್ಮ(30) ಜವಾಬ್ದಾರಿಯ ಆಟವಾಡಿದರು. ಮೂರನೇ ವಿಕೆಟ್ಗೆ ಈ ಜೋಡಿ 60 ರನ್ಗಳ ಜೊತೆಯಾಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಟಿಮ್ ಡೇವಿಡ್(24*) ತಂಡವನ್ನ ಗೆಲುವಿನ ದಡಮುಟ್ಟಿಸಿದ್ದಾರೆ. ಕೆಕೆಆರ್ ಪರ ಸುಯಶ್ ಶರ್ಮ 2, ಶಾರ್ದೂಲ್, ಚಕ್ರವರ್ತಿ ಹಾಗೂ ಫರ್ಗುಸನ್ ತಲಾ 1 ವಿಕೆಟ್ ಪಡೆದರು. ತಂಡದ ಸೋಲಿನ ಆಘಾತದ ನಡುವೆಯೂ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ವೆಂಕಟೇಶ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
IPL 2023, Mumbai Indians, Kolkata Knight Riders, Venkatesh Iyer, Ishan Kishan,